Bible Languages

Indian Language Bible Word Collections

Bible Versions

Books

2 Kings Chapters

2 Kings 5 Verses

Bible Versions

Books

2 Kings Chapters

2 Kings 5 Verses

1 ಅರಾಮ್ಯರ ರಾಜನ ಸೇನೆಯಲ್ಲಿ ನಾಮಾನನೆಂಬ ಸೇನಾಪತಿಯಿದ್ದನು. ನಾಮಾನನು ಅವನ ರಾಜನಿಗೆ ಬಹಳ ಪ್ರಾಮುಖ್ಯ ವ್ಯಕ್ತಿಯಾಗಿದ್ದನು. ಯೆಹೋವನು ನಾಮಾನನ ಮುಖಾಂತರ ಅರಾಮ್ಯರಿಗೆ ವಿಜಯವನ್ನು ತಂದುಕೊಟ್ಟಿದ್ದರಿಂದ ಅವನು ಪ್ರಮುಖನಾಗಿದ್ದನು. ನಾಮಾನನು ಮಹಾಪುರುಷನೂ ಶಕ್ತಿಶಾಲಿಯೂ ಆದ ಮನುಷ್ಯನಾಗಿದ್ದನು. ಆದರೆ ಅವನು ಕುಷ್ಠರೋಗ ಪೀಡಿತನಾಗಿದ್ದನು.
2 ಅರಾಮ್ಯರು ಇಸ್ರೇಲಿನಲ್ಲಿ ಹೋರಾಡಲು ಸೈನಿಕರ ಅನೇಕ ಗುಂಪುಗಳನ್ನು ಕಳುಹಿಸಿದರು. ಸೈನಿಕರು ಜನರನ್ನು ತಮ್ಮ ಗುಲಾಮರಂತೆ ಹಿಡಿದುತಂದರು. ಒಂದು ಸಲ ಚಿಕ್ಕ ಹುಡುಗಿಯೊಬ್ಬಳನ್ನು ಇಸ್ರೇಲ್ ದೇಶದಿಂದ ಹಿಡಿದುತಂದರು. ಈ ಚಿಕ್ಕ ಹುಡುಗಿಯು ನಾಮಾನನ ಪತ್ನಿಗೆ ಸೇವಕಿಯಾದಳು.
3 ಈ ಹುಡುಗಿಯು ನಾಮಾನನ ಪತ್ನಿಗೆ, “ನನ್ನ ಒಡೆಯನಾದ ನಾಮಾನನು ಸಮಾರ್ಯದಲ್ಲಿ ವಾಸಿಸುವ ಪ್ರವಾದಿಯಾದ ಎಲೀಷನನ್ನು ಭೇಟಿ ಮಾಡಬೇಕೆಂದು ನಾನು ಆಶಿಸುತ್ತೇನೆ. ಆ ಪ್ರವಾದಿಯು ನಾಮಾನನ ಕುಷ್ಠರೋಗವನ್ನು ಗುಣಪಡಿಸಬಲ್ಲನು” ಎಂದು ಹೇಳಿದಳು.
4 ನಾಮಾನನು ತನ್ನ ಒಡೆಯನಾದ ಅರಾಮ್ಯರ ರಾಜನ ಬಳಿಗೆ ಹೋದನು. ಇಸ್ರೇಲಿನ ಹುಡುಗಿಯು ಹೇಳಿದ ಸಂಗತಿಗಳನ್ನು, ನಾಮಾನನು ಅರಾಮ್ಯರ ರಾಜನಿಗೆ ಹೇಳಿದನು.
5 ಆಗ ಅರಾಮ್ಯರ ರಾಜನು, “ಈಗಲೇ ಹೋಗು, ನಾನು ಇಸ್ರೇಲಿನ ರಾಜನಿಗೆ ಪತ್ರವೊಂದನ್ನು ಕಳುಹಿಸುತ್ತೇನೆ” ಎಂದು ಹೇಳಿದನು. ನಾಮಾನನು ಇಸ್ರೇಲಿಗೆ ಹೋದನು. ನಾಮಾನನು ಮುನ್ನೂರ ನಲವತ್ತು ಕಿಲೋಗ್ರಾಂ ಬೆಳ್ಳಿ, ಆರುಸಾವಿರ ಚಿನ್ನದ ನಾಣ್ಯಗಳನ್ನು ಮತ್ತು ಹತ್ತು ಥಾನು ಬಟ್ಟೆಗಳನ್ನು ಕಾಣಿಕೆಯಾಗಿ ತೆಗೆದುಕೊಂಡು ಹೋದನು.
6 ನಾಮಾನನು ಅರಾಮ್ಯರ ರಾಜನಿಂದ ಇಸ್ರೇಲ್ ರಾಜನಿಗೆ ಪತ್ರವೊಂದನ್ನು ತೆಗೆದುಕೊಂಡು ಹೋದನು. ಆ ಪತ್ರದಲ್ಲಿ, “׹ನನ್ನ ಸೇವಕನಾದ ನಾಮಾನನನ್ನು ನಿಮ್ಮ ಬಳಿಗೆ ನಾನು ಕಳುಹಿಸುತ್ತಿದ್ದೇನೆ. ಅವನ ಕುಷ್ಠರೋಗವನ್ನು ಗುಣಪಡಿಸಿ” ಎಂದು ಬರೆದಿತ್ತು.
7 ಇಸ್ರೇಲಿನ ರಾಜನು ಪತ್ರವನ್ನು ಓದಿದಾಗ, ದುಃಖದಿಂದ ತನ್ನ ಬಟ್ಟೆಗಳನ್ನು ಹರಿದುಕೊಂಡು, “ನಾನು ದೇವರೇನು? ಇಲ್ಲ! ಹುಟ್ಟು ಮತ್ತು ಸಾವುಗಳ ಮೇಲೆ ನನಗೆ ಯಾವ ಶಕ್ತಿಯೂ ಇಲ್ಲ. ಹೀಗಿರುವಾಗ ಅರಾಮ್ಯರ ರಾಜನು ಕುಷ್ಠರೋಗ ಪೀಡಿತನಾದ ಮನುಷ್ಯನನ್ನು ನನ್ನ ಬಳಿಗೆ ಗುಣಪಡಿಸಲು ಏಕೆ ಕಳುಹಿಸಿದನು? ಇದರ ಬಗ್ಗೆ ನೀವೇ ಯೋಚಿಸಿರಿ. ಇದು ಒಂದು ಕುತಂತ್ರವೆಂಬುದು ನಿಮಗೇ ತಿಳಿಯುತ್ತದೆ. ಅರಾಮ್ಯರ ರಾಜನು ಯುದ್ಧವನ್ನು ಆರಂಭಿಸಲು ಪ್ರಯತ್ನಿಸುತ್ತಿದ್ದಾನೆ!” ಎಂದು ಹೇಳಿದನು.
8 ಇಸ್ರೇಲಿನ ರಾಜನು ದುಃಖದಿಂದ ತನ್ನ ಬಟ್ಟೆಗಳನ್ನು ಹರಿದುಕೊಂಡನೆಂಬುದು ದೇವಮನುಷ್ಯನಾದ ಎಲೀಷನಿಗೆ ತಿಳಿಯಿತು. ಎಲೀಷನು ರಾಜನಿಗೆ ಈ ಸಂದೇಶವನ್ನು ಕಳುಹಿಸಿದನು: “ನೀನು ನಿನ್ನ ಬಟ್ಟೆಗಳನ್ನು ಹರಿದುಕೊಂಡಿದ್ದು ಏಕೆ? ನಾಮಾನನು ನನ್ನ ಬಳಿಗೆ ಬರಲಿ. ಇಸ್ರೇಲಿನಲ್ಲಿ ಒಬ್ಬ ಪ್ರವಾದಿ ಇದ್ದಾನೆಂಬುದು ಅವನಿಗೆ ತಿಳಿಯುತ್ತದೆ!”
9 ನಾಮಾನನು ತನ್ನ ಕುದುರೆಗಳೊಂದಿಗೆ ಮತ್ತು ರಥಗಳೊಂದಿಗೆ ಎಲೀಷನ ಮನೆಗೆ ಬಂದು, ಬಾಗಿಲಿನ ಹೊರಗಡೆ ನಿಂತುಕೊಂಡನು.
10 ಎಲೀಷನು ತನ್ನ ಸಂದೇಶಕನ ಮೂಲಕ ನಾಮಾನನಿಗೆ, “ಹೋಗಿ, ಜೋರ್ಡನ್ ನದಿಯಲ್ಲಿ ಏಳು ಸಲ ಸ್ನಾನಮಾಡು. ಆಗ ನಿನ್ನ ಚರ್ಮ ರೋಗವು ಗುಣವಾಗುವುದು. ನೀನು ಸಂಪೂರ್ಣ ಶುದ್ಧನಾಗುವೆ” ಎಂದು ತಿಳಿಸಿದನು.
11 ನಾಮಾನನು ಕೋಪಗೊಂಡು, “ಎಲೀಷನು ಕೊನೆಯ ಪಕ್ಷ ಬಂದು, ನನ್ನೆದುರು ನಿಂತು, ತನ್ನ ದೇವರಾದ ಯೆಹೋವನ ಹೆಸರಿನಲ್ಲಿ ನನ್ನನ್ನು ಕರೆಯುತ್ತಿದ್ದನೆಂದು ನಾನು ಭಾವಿಸಿದ್ದೆನು. ಅವನು ತನ್ನ ಕೈಗಳನ್ನು ನನ್ನ ದೇಹದ ಮೇಲೆ ಸವರಿ, ನನ್ನ ಕುಷ್ಠರೋಗವನ್ನು ಗುಣಪಡಿಸುವನೆಂದು ನಾನು ಭಾವಿಸಿದ್ದೆನು.
12 ದಮಸ್ಕದ ಅಬಾನಾ ಮತ್ತು ಪರ್ಪರ್ ನದಿಗಳು ಇಸ್ರೇಲಿನ ಎಲ್ಲಾ ನದಿಗಳಿಗಿಂತಲೂ ಉತ್ತಮ! ನಾನು ದಮಸ್ಕದ ಆ ನದಿಗಳಲ್ಲಿ ಸ್ನಾನಮಾಡಿ, ಶುದ್ಧನಾಗಬಾರದೇಕೆ?” ಎಂದುಕೊಂಡು ಕೋಪದಿಂದ ಹಿಂದಿರುಗಿ ಹೋದನು!
13 ಆಗ ನಾಮಾನನ ಸೇವಕರು ಅವನ ಬಳಿಗೆ ಬಂದು ಅವನಿಗೆ, “ತಂದೆಯೇ, ಪ್ರವಾದಿಯು ಒಂದು ಕಠಿಣವಾದ ಕಾರ್ಯವನ್ನು ಹೇಳಿದ್ದರೆ, ನೀವು ಅದನ್ನು ಮಾಡುತ್ತಿದ್ದಿರಿ! ಅಲ್ಲವೇ? ಹೀಗಿರಲು ಸುಲಭವಾದ ಒಂದು ಕಾರ್ಯವನ್ನು ಅವನು ನಿಮಗೆ ಹೇಳಿರುವಾಗ ನೀವು ಅವನಿಗೆ ವಿಧೇಯರಾಗಬಾರದೇಕೆ? ನೀವು ಸ್ನಾನಮಾಡಿದರೆ, ಶುಚಿಗೊಂಡು ಶುದ್ಧರಾಗುವಿರಿ’ ಎಂದು ಹೇಳಿದರು.
14 ದೇವಮನುಷ್ಯನು (ಎಲೀಷನು) ಹೇಳಿದಂತೆಯೇ ನಾಮಾನನು ಜೋರ್ಡನ್ ನದಿಯಲ್ಲಿ ಇಳಿದು ಏಳುಸಾರಿ ಮುಳುಗಿ ಮೇಲೆದ್ದನು. ಆಗ ನಾಮಾನನು ಸಂಪೂರ್ಣ ಶುದ್ಧನಾದನು; ಅವನ ಚರ್ಮವು ಮಗುವಿನ ಚರ್ಮದಂತೆ ಕೋಮಲವಾಯಿತು.
15 ನಾಮಾನನು ತನ್ನ ಗುಂಪಿನೊಂದಿಗೆ ದೇವಮನುಷ್ಯನ ಹತ್ತಿರಕ್ಕೆ ಹಿಂದಿರುಗಿ ಬಂದನು. ಅವನು ಎಲೀಷನ ಮುಂದೆ ನಿಂತು, “ನೋಡಿ, ಇಸ್ರೇಲಿನಲ್ಲಿಯೇ ಹೊರತು ಭೂಮಂಡಲದ ಬೇರೆಲ್ಲಿಯೂ ದೇವರು ಇಲ್ಲವೇ ಇಲ್ಲ ಎಂಬುದು ಈಗ ತಾನೇ ನನಗೆ ತಿಳಿಯಿತು! ಈಗ ದಯಮಾಡಿ ನನ್ನ ಕಾಣಿಕೆಯನ್ನು ಸ್ವೀಕರಿಸಿ!” ಎಂದು ಹೇಳಿದನು.
16 ಆದರೆ ಎಲೀಷನು, “ನಾನು ಯೆಹೋವನ ಸೇವೆ ಮಾಡುತ್ತೇನೆ. ಯೆಹೋವನಾಣೆಯಾಗಿ ಪ್ರಮಾಣ ಮಾಡುತ್ತೇನೆ, ನಾನು ಯಾವ ಕಾಣಿಕೆಯನ್ನು ಸ್ವೀಕರಿಸುವುದಿಲ್ಲ” ಎಂದು ಹೇಳಿದನು. ಎಲೀಷನು ಕಾಣಿಕೆಯನ್ನು ಸ್ವೀಕರಿಸುವಂತೆ ನಾಮಾನನು ಬಹಳ ಪ್ರಯತ್ನಿಸಿದನು. ಆದರೆ ಎಲೀಷನು ನಿರಾಕರಿಸಿದನು.
17 ಆಗ ನಾಮಾನನು, “ನೀನು ಈ ಕಾಣಿಕೆಯನ್ನು ಸ್ವೀಕರಿಸದಿದ್ದರೆ, ಕೊನೆಯ ಪಕ್ಷ ನನಗಾಗಿ ಈ ಕಾರ್ಯವನ್ನು ಮಾಡು. ನನ್ನ ಎರಡು ಹೇಸರಕತ್ತೆಗಳ ಮೇಲಿನ ಬುಟ್ಟಿಗಳು ತುಂಬುವಷ್ಟು ಇಸ್ರೇಲಿನ ಮಣ್ಣನ್ನು ನನಗೆ ಕೊಡಿಸಬೇಕೆಂದು ಬೇಡುತ್ತೇನೆ. ಏಕೆಂದರೆ ಇತರ ದೇವರುಗಳಿಗೆ ನಾನು ಮತ್ತೆ ಎಂದೆಂದಿಗೂ ಸರ್ವಾಂಗಹೋಮವನ್ನಾಗಲಿ ಯಜ್ಞಗಳನ್ನಾಗಲಿ ಅರ್ಪಿಸುವುದಿಲ್ಲ. ನಾನು ಯೆಹೋವನಿಗೆ ಮಾತ್ರ ಯಜ್ಞಗಳನ್ನು ಅರ್ಪಿಸುತ್ತೇನೆ!
18 ಆದರೆ ಈ ವಿಷಯದಲ್ಲಿ ಯೆಹೋವನು ನನ್ನನ್ನು ಕ್ಷಮಿಸಲಿ. ನನ್ನ ಒಡೆಯನಾದ ಅರಾಮ್ಯರ ರಾಜನು ಸುಳ್ಳುದೇವರಾದ ರಿಮ್ಮೋನನನ್ನು ಪೂಜಿಸಲು ಅವನ ಆಲಯಕ್ಕೆ ಹೋಗಿ ನನ್ನ ಕೈಹಿಡಿದು ಆ ದೇವರಿಗೆ ನಮಸ್ಕಾರ ಮಾಡುವಾಗ ನಾನೂ ನಮಸ್ಕಾರ ಮಾಡಬೇಕಾಗುವುದು. ಈ ಒಂದು ವಿಷಯದಲ್ಲಿ ಯೆಹೋವನು ನನಗೆ ಕ್ಷಮೆಯನ್ನು ಅನುಗ್ರಹಿಸಬೇಕು” ಎಂದು ಹೇಳಿದನು.
19 ಆಗ ಎಲೀಷನು, “ಸಮಾಧಾನದಿಂದ ಹೋಗು” ಎಂದನು. ನಾಮಾನನು ಎಲೀಷನ ಬಳಿಯಿಂದ ಸ್ವಲ್ಪದೂರ ಹೋದನು.
20 ಆದರೆ ದೇವಮನುಷ್ಯನಾದ ಎಲೀಷನ ಸೇವಕನಾದ ಗೇಹಜಿಯು, “ನೋಡು, ಅರಾಮ್ಯನಾದ ನಾಮಾನನು ತಂದಿದ್ದ ಕಾಣಿಕೆಯನ್ನು ಸ್ವೀಕರಿಸದೆ ನನ್ನ ಒಡೆಯನಾದ ಎಲೀಷನು ಅವನನ್ನು ಕಳುಹಿಸಿಬಿಟ್ಟನು! ಯೆಹೋವನಾಣೆಯಾಗಿ, ನಾನು ನಾಮಾನನ ಹಿಂದೆ ಓಡಿಹೋಗಿ ಅವನಿಂದ ಏನನ್ನಾದರೂ ಪಡೆಯುತ್ತೇನೆ!” ಎಂದು ತನ್ನೊಳಗೆ ಅಂದುಕೊಂಡು,
21 ನಾಮಾನನ ಬಳಿಗೆ ಓಡಿದನು. ನಾಮಾನನು ತನ್ನ ಹಿಂದೆ ಓಡಿ ಬರುತ್ತಿರುವ ಒಬ್ಬನನ್ನು ನೋಡಿ ಗೇಹಜಿಯನ್ನು ಸಂಧಿಸಲು ರಥದಿಂದ ಇಳಿದನು. ನಾಮಾನನು, “ಎಲ್ಲವೂ ಕ್ಷೇಮವೇ?” ಎಂದು ಕೇಳಿದನು.
22 ಗೇಹಜಿಯು, “ಹೌದು, ಎಲ್ಲವೂ ಕ್ಷೇಮವಾಗಿದೆ. ನನ್ನ ಒಡೆಯನಾದ ಎಲೀಷನು ನನಗೆ, ‘ನೋಡು, ಎಫ್ರಾಯೀಮ್ ಬೆಟ್ಟಪ್ರಾಂತ್ಯದ ಪ್ರವಾದಿಗಳ ಗುಂಪಿನಿಂದ ನನ್ನ ಬಳಿಗೆ ಇಬ್ಬರು ತರುಣರು ಬಂದಿದ್ದಾರೆ. ದಯವಿಟ್ಟು ಅವರಿಗೆ ಮೂವತ್ತೈದು ಕಿಲೋ.ಗ್ರಾಂ. ಬೆಳ್ಳಿಯನ್ನು ಮತ್ತು ಎರಡು ಥಾನು ಬಟ್ಟೆಯನ್ನು ತೆಗೆದುಕೊಂಡು ಬಾ’ ಎಂದು ನನ್ನನ್ನು ಕಳುಹಿಸಿದನು” ಎಂದು ಹೇಳಿದನು.
23 ನಾಮಾನನು, “ದಯಮಾಡಿ ಎಪ್ಪತ್ತು ಕಿಲೋಗ್ರಾಂ ತೆಗೆದುಕೊ!” ಎಂದು ಗೇಹಜಿಗೆ ಒತ್ತಾಯಪಡಿಸಿ ಎಪ್ಪತ್ತು ಕಿಲೋಗ್ರಾಂ ಬೆಳ್ಳಿಯನ್ನು ಎರಡು ಚೀಲಗಳಲ್ಲಿ ಹಾಕಿದನು ಮತ್ತು ಎರಡು ಥಾನು ಬಟ್ಟೆಯನ್ನು ತೆಗೆದುಕೊಂಡು ತನ್ನ ಸೇವಕರಿಗೆ ಕೊಟ್ಟನು. ಆ ಸೇವಕರು ಈ ವಸ್ತುಗಳನ್ನು ತೆಗೆದುಕೊಂಡು ಗೇಹಜಿಯೊಡನೆ ಹೋದರು.
24 ಗೇಹಜಿಯು ಬೆಟ್ಟಕ್ಕೆ ಬಂದಾಗ, ಅವುಗಳನ್ನು ಸೇವಕರಿಂದ ತೆಗೆದುಕೊಂಡು ಅವರನ್ನು ಕಳುಹಿಸಿಬಿಟ್ಟನು. ನಂತರ ಗೇಹಜಿಯು ಅವುಗಳನ್ನು ಮನೆಯಲ್ಲಿ ಅಡಗಿಸಿಟ್ಟನು.
25 ಗೇಹಜಿಯು ಒಳಗೆ ಬಂದು ತನ್ನ ಒಡೆಯನಾದ ಎಲೀಷನ ಮುಂದೆ ನಿಂತುಕೊಂಡನು. ಎಲೀಷನು ಗೇಹಜಿಗೆ, “ನೀನು ಎಲ್ಲಿಗೆ ಹೋಗಿದ್ದೆ?” ಎಂದು ಕೇಳಿದನು. ಗೇಹಜಿಯು, “ನಾನು ಎಲ್ಲಿಗೂ ಹೋಗಿರಲಿಲ್ಲ” ಎಂದನು.
26 ಎಲೀಷನು ಗೇಹಜಿಗೆ, “ಅದು ನಿಜವಲ್ಲ! ನಾಮಾನನು ನಿನ್ನನ್ನು ಸಂಧಿಸಲು ತನ್ನ ರಥದಿಂದ ಹಿಂದಕ್ಕೆ ತಿರುಗಿದಾಗ ನನ್ನ ಹೃದಯವು ನಿನ್ನ ಹತ್ತಿರದಲ್ಲಿಯೇ ಇತ್ತು. ಹಣವನ್ನು, ಬಟ್ಟೆಗಳನ್ನು, ಆಲೀವನ್ನು, ದ್ರಾಕ್ಷಿಯನ್ನು, ಕುರಿಗಳನ್ನು, ಹಸುಗಳನ್ನು ಅಥವಾ ಸೇವಕ ಸೇವಕಿಯರನ್ನು ತೆಗೆದುಕೊಳ್ಳುವ ಕಾಲ ಇದಲ್ಲ.
27 ಈಗ, ನಿನ್ನನ್ನೂ ನಿನ್ನ ಸಂತಾನದವರನ್ನೂ ಸದಾಕಾಲ ನಾಮಾನನ ರೋಗವು ಹಿಡಿದುಕೊಳ್ಳುವುದು. ನಿನಗೆ ಎಂದೆಂದಿಗೂ ಕುಷ್ಠರೋಗವಿರುವುದು!” ಎಂದು ಹೇಳಿದನು. ಗೇಹಜಿಯು ಎಲೀಷನನ್ನು ಬಿಟ್ಟುಹೋದಾಗ, ಗೇಹಜಿಯ ಚರ್ಮವು ಮಂಜುಗಡ್ಡೆಯಂತೆ ಬಿಳುಪಾಯಿತು! ಗೇಹಜಿಯು ಕುಷ್ಠರೋಗ ಪೀಡಿತನಾದನು.

2-Kings 5:17 Kannada Language Bible Words basic statistical display

COMING SOON ...

×

Alert

×