Bible Languages

Indian Language Bible Word Collections

Bible Versions

Books

2 Kings Chapters

2 Kings 3 Verses

Bible Versions

Books

2 Kings Chapters

2 Kings 3 Verses

1 ಅಹಾಬನ ಮಗನಾದ ಯೋರಾವುನು ಸಮಾರ್ಯದಲ್ಲಿ ಇಸ್ರೇಲಿನ ರಾಜನಾದನು. ಯೆಹೋಷಾಫಾಟನ ಹದಿನೆಂಟನೆಯ ವರ್ಷದ ಆಳ್ವಿಕೆಯಲ್ಲಿ ಯೋರಾವುನು ಯೆಹೂದದ ರಾಜನಾಗಿ ಆಳಲಾರಂಭಿಸಿದನು. ಯೋರಾವುನು ಹನ್ನೆರಡು ವರ್ಷ ಆಳಿದನು.
2 ಯೆಹೋವನು ಕೆಟ್ಟದ್ದೆಂದು ಹೇಳಿದ ಕಾರ್ಯಗಳನ್ನು ಯೋರಾವುನು ಮಾಡಿದನು. ಆದರೆ ಯೋರಾವುನು ಅವನ ತಂದೆತಾಯಿಗಳಂತೆ ಇರಲಿಲ್ಲ. ಸುಳ್ಳುದೇವರಾದ ಬಾಳನನ್ನು ಪೂಜಿಸಲು ತನ್ನ ತಂದೆಯು ನಿರ್ಮಿಸಿದ್ದ ಸ್ತಂಭವನ್ನು ಅವನು ಕಿತ್ತುಹಾಕಿಸಿದನು.
3 ಆದರೆ ನೆಬಾಟನ ಮಗನಾದ ಯಾರೊಬ್ಬಾಮನು ಮಾಡಿದ ಪಾಪಗಳನ್ನೇ ಅವನು ಮುಂದುವರಿಸಿದನು. ಇಸ್ರೇಲರು ಪಾಪಗಳನ್ನು ಮಾಡುವಂತೆ ಯಾರೊಬ್ಬಾಮನು ಪ್ರೇರೇಪಿಸಿದ್ದನು. ಯೋರಾವುನು ಯಾರೊಬ್ಬಾಮನ ಪಾಪಗಳನ್ನು ನಿಲ್ಲಿಸಲಿಲ್ಲ.
4 ಮೇಷನು ಮೋವಾಬಿನ ರಾಜನಾಗಿದ್ದನು. ಮೇಷನು ಅನೇಕ ಕುರಿಗಳ ಒಡೆಯನಾಗಿದ್ದನು. ಮೇಷನು ಒಂದು ಲಕ್ಷ ಕುರಿಗಳ ಮತ್ತು ಒಂದು ಲಕ್ಷ ಟಗರುಗಳ ಉಣ್ಣೆಯನ್ನು ಇಸ್ರೇಲಿನ ರಾಜನಿಗೆ ಕೊಡುತ್ತಿದ್ದನು.
5 ಆದರೆ ಅಹಾಬನು ಸತ್ತಾಗ ಮೋವಾಬಿನ ರಾಜನು ಇಸ್ರೇಲಿನ ರಾಜನ ವಿರುದ್ಧವಾಗಿ ದಂಗೆಯೆದ್ದು ಅವನ ಆಳ್ವಿಕೆಯಿಂದ ಬೇರೆಯಾದನು.
6 ಆಗ ರಾಜನಾದ ಯೋರಾವುನು ಸಮಾರ್ಯದಿಂದ ಹೊರಗೆ ಹೋಗಿ, ಇಸ್ರೇಲಿನ ಜನರನ್ನೆಲ್ಲ ಒಟ್ಟುಗೂಡಿಸಿದನು.
7 ಯೋರಾವುನು ಯೆಹೂದದ ರಾಜನಾದ ಯೆಹೋಷಾಫಾಟನ ಬಳಿಗೆ ಸಂದೇಶಕರನ್ನು ಕಳುಹಿಸಿ, “ನನ್ನ ಆಳ್ವಿಕೆಯಿಂದ ಮೋವಾಬಿನ ರಾಜನು ಬೇರ್ಪಟ್ಟಿದ್ದಾನೆ. ಮೋವಾಬಿನ ವಿರುದ್ಧ ಹೋರಾಡಲು ನನ್ನ ಜೊತೆ ಬರುವೆಯಾ?” ಎಂದು ಕೇಳಿದನು. ಯೆಹೋಷಾಫಾಟನು, “ಆಗಲಿ, ನಿನ್ನ ಜೊತೆ ನಾನೂ ಬರುತ್ತೇನೆ. ನಾನೂ ನೀನೂ ಒಂದೇ. ನನ್ನ ಜನರೂ ನಿನ್ನ ಜನರೂ ಒಂದೇ. ನನ್ನ ಕುದುರೆಗಳೂ ನಿನ್ನ ಕುದುರೆಗಳೂ ಒಂದೇ” ಎಂದು ಹೇಳಿದನು.
8 ಯೆಹೋಷಾಫಾಟನು ಯೋರಾವುನನ್ನು, “ನಾವು ಯಾವ ಮಾರ್ಗದಲ್ಲಿ ಹೋಗೋಣ?” ಎಂದು ಕೇಳಿದನು. “ನಾವು ಎದೋಮಿನ ಮರಳುಗಾಡಿನ ಮೂಲಕ ಹೋಗೋಣ” ಎಂದು ಯೋರಾವುನು ಉತ್ತರಿಸಿದನು.
9 ಆದುದರಿಂದ ಇಸ್ರೇಲಿನ ರಾಜನು ಯೆಹೂದದ ಮತ್ತು ಎದೋಮಿನ ರಾಜರೊಂದಿಗೆ ಹೋದನು. ಅವರು ಏಳು ದಿನಗಳ ಕಾಲ ಪ್ರಯಾಣ ಮಾಡಿದರು. ಅವರ ಸೇನೆಗೆ ಮತ್ತು ಪ್ರಾಣಿಗಳಿಗೆ ಸಾಕಾಗುವಷ್ಟು ನೀರು ಅಲ್ಲಿ ಇರಲಿಲ್ಲ.
10 ಆಗ ಇಸ್ರೇಲಿನ ರಾಜನಾದ ಯೋರಾವುನು, “ಅಯ್ಯೋ, ಮೂವರು ರಾಜರಾದ ನಮ್ಮನ್ನು ನಿಜವಾಗಿಯೂ ಒಟ್ಟಿಗೆ ಬರಮಾಡಿದ ಯೆಹೋವನು ನಮ್ಮನ್ನು ಮೋವಾಬ್ಯರು ಸೋಲಿಸುವಂತೆ ಮಾಡಿದನಲ್ಲಾ!” ಎಂದು ಹೇಳಿದನು.
11 ಆದರೆ ಯೆಹೋಷಾಫಾಟನು, “ಯೆಹೋವನ ಪ್ರವಾದಿಗಳಲ್ಲಿ ನಿಜವಾಗಿಯೂ ಯಾರಾದರೊಬ್ಬರು ಇಲ್ಲಿರಬೇಕು. ನಾವೇನು ಮಾಡಬೇಕೆಂದು ಯೆಹೋವನು ಹೇಳುತ್ತಾನೆ. ಅದಕ್ಕಾಗಿ ನಾವು ಆ ಪ್ರವಾದಿಯನ್ನು ಕೇಳೋಣ” ಎಂದು ಹೇಳಿದನು. ಇಸ್ರೇಲಿನ ರಾಜನ ಸೇವಕರಲ್ಲಿ ಒಬ್ಬನು, “ಶಾಫಾಟನ ಮಗನಾದ ಎಲೀಷನು ಇಲ್ಲಿಯೇ ಇದ್ದಾನೆ. ಎಲೀಷನು ಎಲೀಯನ ಸೇವಕನಾಗಿದ್ದನು” ಎಂದು ಹೇಳಿದನು.
12 ಯೆಹೋಷಾಫಾಟನು, “ಯೆಹೋವನ ನುಡಿಗಳು ಎಲೀಷನಲ್ಲಿವೆ!” ಎಂದು ಹೇಳಿದನು. ಇಸ್ರೇಲಿನ ರಾಜನಾದ ಯೋರಾವುನು, ಯೆಹೋಷಾಫಾಟನು ಮತ್ತು ಎದೋಮಿನ ರಾಜನು ಎಲೀಷನನ್ನು ನೋಡಲು ಹೋದರು.
13 ಎಲೀಷನು ಇಸ್ರೇಲಿನ ರಾಜನಿಗೆ, “ನನ್ನಿಂದ ನಿನಗೆ ಏನು ಬೇಕಾಗಿದೆ? ನಿನ್ನ ತಂದೆತಾಯಿಯರ ಪ್ರವಾದಿಗಳ ಬಳಿಗೆ ಹೋಗು!” ಎಂದು ಹೇಳಿದನು. ಇಸ್ರೇಲಿನ ರಾಜನು ಎಲೀಷನಿಗೆ, “ಇಲ್ಲ, ನಾವು ನಿನ್ನನ್ನು ನೋಡಲೆಂದು ಇಲ್ಲಿಗೆ ಬಂದಿದ್ದೇವೆ, ಏಕೆಂದರೆ ಯೆಹೋವನು ಮೂವರು ರಾಜರನ್ನು ಒಟ್ಟಿಗೆ ಬರಮಾಡಿ, ನಮ್ಮನ್ನು ಮೋವಾಬ್ಯರು ಸೋಲಿಸುವಂತೆ ಮಾಡಿದ್ದಾನೆ. ನಾವು ನಿನ್ನ ಸಹಾಯವನ್ನು ಬಯಸಿದ್ದೇವೆ” ಎಂದನು.
14 ಎಲೀಷನು, “ಸರ್ವಶಕ್ತನಾದ ಯೆಹೋವನ ಸೇವೆಯನ್ನು ಮಾಡುವವನು ನಾನು. ಯೆಹೋವನಾಣೆ, ನಾನು ನಿಜವನ್ನು ಹೇಳುತ್ತೇನೆ. ಯೆಹೂದದ ರಾಜನಾದ ಯೆಹೋಷಾಫಾಟನು ಇಲ್ಲಿ ಇಲ್ಲದಿದ್ದರೆ, ನಾನು ನಿನ್ನನ್ನು ಕಣ್ಣೆತ್ತಿಯೂ ನೋಡುತ್ತಿರಲಿಲ್ಲ; ನಿನ್ನನ್ನು ಗಮನಿಸುತ್ತಲೂ ಇರಲಿಲ್ಲ.
15 ಆದರೆ ಈಗ ಕಿನ್ನರಿ ಬಾರಿಸುವ ಒಬ್ಬನನ್ನು ನನ್ನ ಬಳಿಗೆ ಕರೆತನ್ನಿ” ಎಂದು ಹೇಳಿದನು. ಅವನು ಕಿನ್ನರಿಯನ್ನು ಬಾರಿಸಿದಾಗ ಯೆಹೋವನ ಶಕ್ತಿಯು ಎಲೀಷನ ಮೇಲೆ ಬಂದಿತು.
16 ಆಗ ಎಲೀಷನು, “ಯೆಹೋವನು ಇಂತೆನ್ನುತ್ತಾನೆ: ಕಣಿವೆಯಲ್ಲಿ ಗುಂಡಿಗಳನ್ನು ತೋಡಿರಿ.
17 ನೀವು ಗಾಳಿಯನ್ನು ನೋಡುವುದಿಲ್ಲ, ಮಳೆಯನ್ನೂ ನೋಡುವುದಿಲ್ಲ; ಆದರೆ ಆ ಕಣಿವೆಯು ನೀರಿನಿಂದ ತುಂಬಿಕೊಳ್ಳುತ್ತದೆ. ಆಗ ನಿಮಗೆ, ನಿಮ್ಮ ಹಸುಗಳಿಗೆ ಮತ್ತು ಇತರ ಪಶುಗಳಿಗೆ ಕುಡಿಯಲು ನೀರು ಸಿಗುತ್ತದೆ.
18 ಯೆಹೋವನಿಗೆ ಇದು ಸುಲಭ ಸಾಧ್ಯ. ಮೋವಾಬ್ಯರನ್ನು ನೀವು ಸೋಲಿಸುವಂತೆ ಆತನೇ ಅವಕಾಶ ಮಾಡುತ್ತಾನೆ.
19 ಪ್ರತಿಯೊಂದು ಬಲಾಢ್ಯವಾದ ನಗರವನ್ನು ಮತ್ತು ಉತ್ತಮ ನಗರವನ್ನು ನೀವು ಮುತ್ತಿಗೆ ಹಾಕುವಿರಿ. ಪ್ರತಿಯೊಂದು ಒಳ್ಳೆಯ ಮರವನ್ನೂ ನೀವು ಕಡಿದು ಉರುಳಿಸುತ್ತೀರಿ. ಎಲ್ಲಾ ನೀರಿನ ಬುಗ್ಗೆಗಳನ್ನೂ ನೀವು ನಿಲ್ಲಿಸುವಿರಿ. ನೀವು ಕಲ್ಲುಗಳನ್ನೆಸೆದು ಪ್ರತಿಯೊಂದು ಒಳ್ಳೆಯ ತೋಟವನ್ನು ನಾಶಗೊಳಿಸುತ್ತೀರಿ.”
20 ಮುಂಜಾನೆ, ಯಜ್ಞಗಳನ್ನು ಅರ್ಪಿಸುವ ಕಾಲದಲ್ಲಿ ಎದೋಮಿನ ಕಡೆಯಿಂದ ನೀರು ಹರಿಯಲಾರಂಭಿಸಿತು ಮತ್ತು ಕಣಿವೆಯು ತುಂಬಿಕೊಂಡಿತು.
21 ರಾಜರುಗಳು ತಮ್ಮ ವಿರುದ್ಧ ಹೋರಾಡಲು ಬಂದಿದ್ದಾರೆಂಬುದು ಮೋವಾಬ್ಯರ ಜನರಿಗೆ ತಿಳಿಯಿತು. ಮೋವಾಬಿನ ಗಂಡಸರು ಅಂದರೆ ಯುದ್ಧಕವಚಗಳನ್ನು ಧರಿಸಿಕೊಳ್ಳಲು ಶಕ್ತರಾಗಿದ್ದ ಎಲ್ಲರು ಒಟ್ಟಾಗಿ ಸೇರಿಬಂದು (ಯುದ್ಧಕ್ಕೆ ಸಿದ್ಧರಾಗಿ) ಗಡಿಯಲ್ಲಿ ಕಾಯತೊಡಗಿದರು.
22 ಮೋವಾಬಿನ ಜನರು ಅಂದು ಮುಂಜಾನೆ ನಸುಕಿನಲ್ಲೇ ಮೇಲೆದ್ದರು. ಸೂರ್ಯನ ಕಿರಣಗಳು ಕಣಿವೆಯ ನೀರಿನ ಮೇಲೆ ಹೊಳೆಯುತ್ತಿದ್ದವು. ಮೋವಾಬಿನ ಜನರಿಗೆ ಅವು ರಕ್ತದಂತೆ ಕಂಡವು.
23 ಮೋವಾಬಿನ ಜನರು, “ರಕ್ತದತ್ತ ನೋಡಿ! ರಾಜರುಗಳು ಪರಸ್ಪರ ಹೋರಾಡಿರಲೇಬೇಕು. ಅವರು ಒಬ್ಬರನ್ನೊಬ್ಬರು ನಾಶಗೊಳಿಸಿರಲೇಬೇಕು. ಸತ್ತಿರುವ ದೇಹಗಳಿಂದ ಬೆಲೆಬಾಳುವ ವಸ್ತುಗಳನ್ನು ದೋಚಿಕೊಳ್ಳೋಣ!” ಎಂದು ಹೇಳಿದರು.
24 ಮೋವಾಬಿನ ಜನರು ಇಸ್ರೇಲರ ಪಾಳೆಯಕ್ಕೆ ಬಂದರು. ಆದರೆ ಇಸ್ರೇಲರು ಹೊರಗೆ ಬಂದು ಮೋವಾಬಿನ ಸೈನ್ಯದ ಮೇಲೆ ಆಕ್ರಮಣ ಮಾಡಿದರು. ಮೋವಾಬಿನ ಜನರು ಇಸ್ರೇಲಿಯರಿಂದ ತಪ್ಪಿಸಿಕೊಂಡು ಓಡಿಹೋದರು. ಇಸ್ರೇಲರು ಮುನ್ನುಗ್ಗಿ ಮೋವಾಬಿನವರನ್ನು ಕೊಂದುಹಾಕಿದರು.
25 ಇಸ್ರೇಲರು ನಗರಗಳನ್ನು ಕೆಡವಿಹಾಕಿದರು. ಅವರು ಮೋವಾಬಿನ ಪ್ರತಿಯೊಂದು ಉತ್ತಮ ತೋಟದ ಕಡೆಗೆ ಕಲ್ಲುಗಳನ್ನೆಸೆದರು. ಅವರು ನೀರಿನ ಬುಗ್ಗೆಗಳನ್ನೆಲ್ಲ ನಿಲ್ಲಿಸಿದರು. ಅವರು ಉತ್ತಮವಾದ ಮರಗಳನ್ನು ಕಡಿದು ಉರುಳಿಸಿದರು. ಇಸ್ರೇಲರು ಕೀರ್ಹರೆಷೆತ್‌ನ ಮಾರ್ಗದುದ್ದಕ್ಕೂ ಹೋರಾಟ ಮಾಡಿದರು. ಸೈನಿಕರು ಕೀರ್ಹರೆಷೆತನ್ನು ಸುತ್ತುವರಿದು ಅದಕ್ಕೂ ಮುತ್ತಿಗೆ ಹಾಕಿದರು.
26 ಆ ಯುದ್ಧವು ತನ್ನ ಶಕ್ತಿಯನ್ನು ಮೀರಿ ಹೋಯಿತೆಂದು ಮೋವಾಬಿನ ರಾಜನು ಗ್ರಹಿಸಿಕೊಂಡನು. ಆದ್ದರಿಂದ ಅವನು ಎದೋಮಿನ ರಾಜನನ್ನು ಕೊಂದುಹಾಕಲು ಖಡ್ಗಗಳನ್ನು ಹಿಡಿದ ತನ್ನ ಏಳುನೂರು ಜನರೊಂದಿಗೆ ನುಗ್ಗಿಹೋಗಲು ಪ್ರಯತ್ನಿಸಿದನು. ಆದರೆ ಅವರು ಎದೋಮಿನ ರಾಜನ ಬಳಿಗೆ ನುಗ್ಗಿ ಹೋಗಲಾಗಲಿಲ್ಲ.
27 ಆಗ ಮೋವಾಬಿನ ರಾಜನು, ತನ್ನ ನಂತರ ರಾಜನಾಗುವ ಹಿರಿಯ ಮಗನನ್ನು ಕರೆದೊಯ್ದನು. ಮೋವಾಬಿನ ರಾಜನು ನಗರವನ್ನು ಸುತ್ತುವರಿದಿರುವ ಗೋಡೆಯ ಮೇಲೆ ತನ್ನ ಮಗನನ್ನು ವಧಿಸಿ ಸರ್ವಾಂಗಹೋಮವನ್ನಾಗಿ ಅರ್ಪಿಸಿದನು. ಈ ಕಾರ್ಯವು ಇಸ್ರೇಲಿನ ಜನರನ್ನು ತಳಮಳಗೊಳಿಸಿತು. ಇಸ್ರೇಲಿನ ಜನರು ಮೋವಾಬಿನ ರಾಜನನ್ನು ಬಿಟ್ಟು ತಮ್ಮ ಸ್ವಂತ ದೇಶಕ್ಕೆ ಹಿಂದಿರುಗಿ ಹೋದರು.

2-Kings 3:22 Kannada Language Bible Words basic statistical display

COMING SOON ...

×

Alert

×