English Bible Languages

Indian Language Bible Word Collections

Bible Versions

English

Tamil

Hebrew

Greek

Malayalam

Hindi

Telugu

Kannada

Gujarati

Punjabi

Urdu

Bengali

Oriya

Marathi

Assamese

Books

2 Kings Chapters

2 Kings 2 Verses

1 ಯೆಹೋವನು ಎಲೀಯನನ್ನು ಸುಂಟರಗಾಳಿಯ ಮೂಲಕ ಪರಲೋಕಕ್ಕೆ ಕರೆದುಕೊಳ್ಳುವ ಕಾಲ ಹತ್ತಿರ ಬಂದಿತು. ಎಲೀಯನು ಎಲೀಷನೊಡನೆ ಗಿಲ್ಗಾಲಿನಿಂದ ಹೋದನು.
2 ಎಲೀಯನು ಎಲೀಷನಿಗೆ, “ದಯವಿಟ್ಟು ಇಲ್ಲಿಯೇ ಇರು; ಏಕೆಂದರೆ ಬೇತೇಲಿಗೆ ಹೋಗುವಂತೆ ಯೆಹೋವನು ನನಗೆ ಆಜ್ಞಾಪಿಸಿದ್ದಾನೆ” ಎಂದು ಹೇಳಿದನು. ಆದರೆ ಎಲೀಷನು, “ಯೆಹೋವನಾಣೆ, ನಿನ್ನಾಣೆ, ನಾನು ನಿನ್ನನ್ನು ಬಿಟ್ಟಿರುವುದಿಲ್ಲವೆಂದು ಪ್ರಮಾಣ ಮಾಡುತ್ತೇನೆ” ಎಂದು ಹೇಳಿದನು. ಇಬ್ಬರೂ ಬೇತೇಲಿಗೆ ಹೋದರು.
3 ಬೇತೇಲಿನಲ್ಲಿ ಪ್ರವಾದಿಗಳ ಗುಂಪೊಂದು ಎಲೀಷನ ಬಳಿಗೆ ಬಂದು, ಅವನಿಗೆ, “ಯೆಹೋವನು ಈ ದಿನ ನಿನ್ನ ಒಡೆಯನನ್ನು ನಿನ್ನಿಂದ ತೆಗೆದುಕೊಳ್ಳುತ್ತಾನೆಂಬುದು ನಿನಗೆ ತಿಳಿದಿದೆಯೇ?” ಎಂದು ಕೇಳಿದರು. ಎಲೀಷನು, “ಹೌದು, ನನಗೆ ಅದು ತಿಳಿದಿದೆ. ಅದರ ಬಗ್ಗೆ ಮಾತನಾಡಬೇಡಿ” ಎಂದನು.
4 ಎಲೀಯನು ಎಲೀಷನಿಗೆ, “ದಯವಿಟ್ಟು ಇಲ್ಲಿಯೇ ಇರು, ಏಕೆಂದರೆ ಯೆಹೋವನು ಜೆರಿಕೊವಿಗೆ ಹೋಗುವಂತೆ ನನಗೆ ಆಜ್ಞಾಪಿಸಿದ್ದಾನೆ” ಎಂದು ಹೇಳಿದನು. ಆದರೆ ಎಲೀಷನು, “ಯೆಹೋವನಾಣೆ, ನಿನ್ನಾಣೆ, ನಾನು ನಿನ್ನನ್ನು ಬಿಟ್ಟಿರುವುದಿಲ್ಲವೆಂದು ಪ್ರಮಾಣ ಮಾಡುತ್ತೇನೆ!” ಎಂದು ಹೇಳಿದನು. ಇಬ್ಬರೂ ಜೆರಿಕೊವಿಗೆ ಹೋದರು.
5 ಜೆರಿಕೊದಲ್ಲಿ ಪ್ರವಾದಿಗಳ ಗುಂಪೊಂದು ಎಲೀಷನ ಬಳಿಗೆ ಬಂದು ಅವನಿಗೆ, “ಯೆಹೋವನು ಈ ದಿನ ನಿನ್ನ ಒಡೆಯನನ್ನು ನಿನ್ನಿಂದ ತೆಗೆದುಕೊಳ್ಳುತ್ತಾನೆಂಬುದು ನಿನಗೆ ತಿಳಿದಿದೆಯೇ?” ಎಂದು ಕೇಳಿದರು. ಎಲೀಷನು, “ಹೌದು, ನನಗೆ ಅದು ತಿಳಿದಿದೆ. ಅದರ ಬಗ್ಗೆ ಮಾತನಾಡಬೇಡಿ” ಎಂದನು.
6 ಎಲೀಯನು ಎಲೀಷನಿಗೆ, “ದಯವಿಟ್ಟು ಇಲ್ಲಿಯೇ ಇರು, ಏಕೆಂದರೆ ಯೆಹೋವನು ಜೋರ್ಡನ್ ನದಿಗೆ ಹೋಗುವಂತೆ ನನಗೆ ಆಜ್ಞಾಪಿಸಿದ್ದಾನೆ” ಎಂದು ಹೇಳಿದನು. ಎಲೀಷನು, “ಯೆಹೋವನಾಣೆ, ನಿನ್ನಾಣೆ, ನಾನು ನಿನ್ನನ್ನು ಬಿಟ್ಟಿರುವುದಿಲ್ಲವೆಂದು ಪ್ರಮಾಣ ಮಾಡುತ್ತೇನೆ” ಎಂದು ಹೇಳಿದನು. ಅವರಿಬ್ಬರೂ ಮುಂದೆ ಸಾಗಿದರು.
7 ಅವರನ್ನು ಹಿಂಬಾಲಿಸಿಕೊಂಡು ಬಂದ ಪ್ರವಾದಿಗಳ ಗುಂಪಿನಲ್ಲಿ ಐವತ್ತು ಮಂದಿ ಅಲ್ಲಿದ್ದರು. ಎಲೀಯ ಮತ್ತು ಎಲೀಷರು ಜೋರ್ಡನ್ ನದಿಯ ಹತ್ತಿರ ನಿಂತುಕೊಂಡರು. ಆ ಐವತ್ತು ಮಂದಿ ಜನರು ಎಲೀಯ ಮತ್ತು ಎಲೀಷರಿಗಿಂತ ಬಹುದೂರದಲ್ಲಿ ನಿಂತುಕೊಂಡರು.
8 ಎಲೀಯನು ತನ್ನ ಮೇಲಂಗಿಯನ್ನು ತೆಗೆದು ಅದರಿಂದ ನೀರನ್ನು ಹೊಡೆದನು. ಆಗ ನೀರು ಎರಡು ಭಾಗವಾಗಿ ಬಲಗಡೆಯಲ್ಲಿಯೂ ಎಡಗಡೆಯಲ್ಲಿಯೂ ನಿಂತುಕೊಂಡಿತು. ನಂತರ ಎಲೀಯ ಮತ್ತು ಎಲೀಷರು ಒಣನೆಲದ ಮೇಲೆ ನದಿಯನ್ನು ದಾಟಿದರು.
9 ಅವರು ನದಿಯನ್ನು ದಾಟಿದ ಮೇಲೆ ಎಲೀಯನು ಎಲೀಷನಿಗೆ, “ದೇವರು ನನ್ನನ್ನು ನಿನ್ನಿಂದ ತೆಗೆದುಕೊಳ್ಳುವುದಕ್ಕೆ ಮುಂಚೆ, ನಾನು ನಿನಗೆ ಏನು ಮಾಡಬೇಕೆಂದು ನೀನು ಅಪೇಕ್ಷಿಸುವೆ?” ಎಂದು ಕೇಳಿದನು. ಎಲೀಷನು, “ನಿನ್ನ ಆತ್ಮವು ನನ್ನ ಮೇಲೆ ಎರಡರಷ್ಟಿರಬೇಕೆಂದು ನಾನು ನಿನ್ನಲ್ಲಿ ಬೇಡುತ್ತೇನೆ” ಎಂದು ಹೇಳಿದನು.
10 ಎಲೀಯನು, “ನೀನು ಕಷ್ಟಕರವಾದುದನ್ನು ಬೇಡಿಕೊಂಡೆ. ನಿನ್ನಿಂದ ನನ್ನನ್ನು ತೆಗೆದುಕೊಳ್ಳುವಾಗ ನೀನು ನನ್ನನ್ನು ಕಂಡರೆ, ಅದು ನಿನಗೆ ದೊರೆಯುವುದು. ಆದರೆ ನಿನ್ನಿಂದ ನನ್ನನ್ನು ತೆಗೆದುಕೊಳ್ಳುವಾಗ ನೀನು ನನ್ನನ್ನು ಕಾಣದಿದ್ದರೆ, ಅದು ನಿನಗೆ ದೊರೆಯುವುದಿಲ್ಲ” ಎಂದು ಹೇಳಿದನು.
11 ಎಲೀಯ ಮತ್ತು ಎಲೀಷ ಒಟ್ಟಿಗೆ ನಡೆಯುತ್ತಾ ಮಾತನಾಡುತ್ತಿದ್ದರು. ಇದ್ದಕ್ಕಿದ್ದಂತೆ, ಕೆಲವು ಕುದುರೆಗಳು ಮತ್ತು ರಥಗಳು ಬಂದು ಎಲೀಯನನ್ನು ಎಲೀಷನಿಂದ ಬೇರ್ಪಡಿಸಿದವು. ಆ ಕುದುರೆಗಳು ಮತ್ತು ರಥಗಳು ಬೆಂಕಿಯಂತಿದ್ದವು! ನಂತರ ಎಲೀಯನು ಸುಂಟರ ಗಾಳಿಯಲ್ಲಿ ಪರಲೋಕಕ್ಕೆ ಏರಿಹೋದನು.
12 ಎಲೀಷನು ಅದನ್ನು ನೋಡಿ, “ನನ್ನ ತಂದೆಯೇ! ನನ್ನ ತಂದೆಯೇ! ಇಸ್ರೇಲಿಗೆ ರಥರಥಾಶ್ವಗಳೂ ಮತ್ತು ಅಶ್ವದಳವೂ ಆಗಿದ್ದವನೇ!” ಎಂದು ಕೂಗಿಕೊಂಡನು. ಎಲೀಷನು ಎಲೀಯನನ್ನು ಮತ್ತೆ ನೋಡಲಿಲ್ಲ. ಎಲೀಷನು ತನ್ನ ಬಟ್ಟೆಗಳನ್ನು ಹಿಡಿದುಕೊಂಡು, ತನ್ನ ದುಃಖವನ್ನು ತೋರ್ಪಡಿಸಲು ಅವುಗಳನ್ನು ಹರಿದು ತುಂಡುತುಂಡು ಮಾಡಿದನು.
13 ಎಲೀಯನ ಮೇಲಂಗಿಯು ನೆಲದ ಮೇಲೆ ಬಿತ್ತು. ಎಲೀಷನು ಅದನ್ನು ಎತ್ತಿಕೊಂಡು ಜೋರ್ಡನ್ ನದಿ ತೀರಕ್ಕೆ ಬಂದನು. ಆ ಕಂಬಳಿಯಿಂದ ನೀರನ್ನು ಹೊಡೆದು, “ಎಲೀಯನ ದೇವರಾದ ಯೆಹೋವನು ಎಲ್ಲಿದ್ದಾನೆ?” ಎಂದು ಕೇಳಿದನು.
14 ಎಲೀಷನು ನೀರನ್ನು ಹೊಡೆದಾಗ, ನೀರು ಎರಡು ಭಾಗವಾಗಿ ಬಲಗಡೆಯಲ್ಲೂ ಎಡಗಡೆಯಲ್ಲೂ ನಿಂತುಕೊಂಡಿತು! ಎಲೀಷನು ನದಿಯನ್ನು ದಾಟಿದನು.
15 ಜೆರಿಕೊದಲ್ಲಿ ಪ್ರವಾದಿಗಳ ಗುಂಪೊಂದು ಎಲೀಷನನ್ನು ಕಂಡು, “ಎಲೀಯನ ಆತ್ಮವು ಈಗ ಎಲೀಷನ ಮೇಲಿದೆ!” ಎಂದು ಹೇಳಿ ಎಲೀಷನನ್ನು ಭೇಟಿಮಾಡಲು ಬಂದರು. ಅವರು ಎಲೀಷನಿಗೆ ಸಾಷ್ಟಾಂಗನಮಸ್ಕಾರ ಮಾಡಿದರು.
16 ಅವರು ಅವನಿಗೆ, “ನೋಡು, ನಮ್ಮಲ್ಲಿ ಐವತ್ತು ಮಂದಿ ಬಲಿಷ್ಠ ಜನರಿದ್ದಾರೆ. ನಿನ್ನ ಒಡೆಯನನ್ನು ಹುಡುಕಲು ದಯವಿಟ್ಟು ಅವರಿಗೆ ಅವಕಾಶಕೊಡು. ಯೆಹೋವನ ಆತ್ಮವು ಎಲೀಯನನ್ನು ಮೇಲಕ್ಕೆ ಎತ್ತಿಕೊಂಡು ಹೋಗಿ ಯಾವುದಾದರೂ ಬೆಟ್ಟದ ಮೇಲಾಗಲಿ ಅಥವಾ ಕಣಿವೆಯಲ್ಲಾಗಲಿ ಬೀಳಿಸಿರಬೇಕು” ಎಂದು ಹೇಳಿದರು. ಆದರೆ ಎಲೀಷನು, “ಇಲ್ಲ, ಎಲೀಯನನ್ನು ಹುಡುಕಲು ಜನರನ್ನು ಕಳುಹಿಸಬೇಡಿ!” ಎಂದು ಉತ್ತರಿಸಿದನು.
17 ಎಲೀಷನು ಕಿರಿಕಿರಿಗೊಂಡು ಒಪ್ಪಿಕೊಳ್ಳುವವರೆಗೆ ಆ ಪ್ರವಾದಿಗಳ ಗುಂಪು ಅವನನ್ನು ಬೇಡಿಕೊಂಡರು. ನಂತರ ಎಲೀಷನು, “ಸರಿ, ಎಲೀಯನನ್ನು ಹುಡುಕಲು ಜನರನ್ನು ಕಳುಹಿಸಿ” ಎಂದು ಹೇಳಿದನು. ಪ್ರವಾದಿಗಳ ಗುಂಪು ಎಲೀಯನನ್ನು ಹುಡುಕಲು ಐವತ್ತು ಮಂದಿ ಜನರನ್ನು ಕಳುಹಿಸಿದರು. ಅವರು ಮೂರು ದಿನ ಹುಡುಕಿದರೂ ಎಲೀಯನನ್ನು ಕಂಡು ಹಿಡಿಯಲಾಗಲಿಲ್ಲ.
18 ಅವರು ಎಲೀಷನು ನೆಲೆಸಿದ್ದ ಜೆರಿಕೊವಿಗೆ ಹೋದರು. ಅವರು ಎಲೀಯನನ್ನು ಕಂಡುಹಿಡಿಯಲಾಗಲಿಲ್ಲವೆಂದು ಎಲೀಷನಿಗೆ ಹೇಳಿದರು. ಎಲೀಷನು ಅವರಿಗೆ, “ನಾನು ನಿಮಗೆ ಹೋಗಬೇಡವೆಂದು ಹೇಳಿದೆನಲ್ಲ” ಎಂದನು.
19 ನಗರದ ಜನರು ಎಲೀಷನಿಗೆ, “ಸ್ವಾಮೀ, ಈ ನಗರವು ಒಳ್ಳೆಯ ಸ್ಥಳದಲ್ಲಿದೆಯೆಂಬುದನ್ನು ನೀನು ನೋಡುತ್ತಿರುವೆ. ಆದರೆ ನೀರು ತುಂಬಾ ಕೆಟ್ಟಿದೆ. ಆ ಕಾರಣದಿಂದಲೇ ಈ ಭೂಮಿಯಲ್ಲಿ ಬೆಳೆಗಳನ್ನು ಬೆಳೆಯಲಾಗುತ್ತಿಲ್ಲ” ಎಂದು ಹೇಳಿದರು.
20 ಎಲೀಷನು, “ಒಂದು ಹೊಸ ಬೋಗುಣಿಯನ್ನು ತಂದು ಅದರಲ್ಲಿ ಉಪ್ಪನ್ನು ಹಾಕಿ” ಎಂದನು. ಜನರು ಎಲೀಷನ ಬಳಿಗೆ ಒಂದು ಬೋಗುಣಿಯನ್ನು ತಂದರು.
21 ನಂತರ ಎಲೀಷನು ನೆಲದಿಂದ ನೀರು ಹರಿಯುತ್ತಿದ್ದ ಸ್ಥಳಕ್ಕೆ ಹೋದನು. ಎಲೀಷನು ಉಪ್ಪನ್ನು ನೀರಿನಲ್ಲಿ ಎಸೆದು, “ ‘ನಾನು ಈ ನೀರನ್ನು ಶುಚಿಗೊಳಿಸಿದ್ದೇನೆ! ಇಲ್ಲಿಂದಾಚೆಗೆ ಈ ನೀರು ಯಾರಿಗೂ ಸಾವನ್ನು ಮತ್ತು ಬಂಜೆತನವನ್ನು ಉಂಟುಮಾಡುವುದಿಲ್ಲ ಮತ್ತು ಈ ಭೂಮಿಯಲ್ಲಿ ಬೆಳೆಗಳು ಬೆಳೆಯುತ್ತವೆ’ ಎಂದು ಯೆಹೋವನು ಹೇಳುತ್ತಾನೆ” ಎಂದನು.
22 ಆ ನೀರು ಶುದ್ಧವಾಯಿತು. ಇಂದು ಆ ನೀರು ಇನ್ನೂ ಶುದ್ಧವಾಗಿದೆ. ಎಲೀಷನು ಹೇಳಿದಂತೆಯೇ ಅದು ಸಂಭವಿಸಿತು.
23 ಎಲೀಷನು ಆ ನಗರದಿಂದ ಬೇತೇಲಿಗೆ ಹೋದನು. ಎಲೀಷನು ನಗರದಿಂದ ಬೆಟ್ಟದ ಮೇಲಕ್ಕೆ ಹೋಗುತ್ತಿದ್ದಾಗ, ಕೆಲವು ಬಾಲಕರು ನಗರದ ಕಡೆಯಿಂದ ಇಳಿಯುತ್ತಿದ್ದರು. ಅವರು ಎಲೀಷನನ್ನು ಹಾಸ್ಯಮಾಡಿ, “ಮೇಲಕ್ಕೆ ಹೋಗು, ಬೋಳುತಲೆಯವನೇ, ಮೇಲಕ್ಕೆ ಹೋಗು, ಬೋಳುತಲೆಯವನೇ” ಎಂದರು.
24 ಎಲೀಷನು ಹಿಂದಕ್ಕೆ ತಿರುಗಿ ಅವರನ್ನು ನೋಡಿ ಅವರಿಗೆ ಕೇಡಾಗುವಂತೆ ಯೆಹೋವನನ್ನು ಕೇಳಿಕೊಂಡನು. ಆಗ ಕಾಡಿನಿಂದ ಎರಡು ಕರಡಿಗಳು ಹೊರಗೆ ಬಂದು ಅವರ ಮೇಲೆರಗಿ ನಲವತ್ತೆರಡು ಮಂದಿ ಬಾಲಕರನ್ನು ಸೀಳಿಹಾಕಿದವು.
25 ಎಲೀಷನು ಬೇತೇಲನ್ನು ಬಿಟ್ಟು ಕಾರ್ಮೆಲ್ ಬೆಟ್ಟಕ್ಕೆ ಹೋದನು. ಅಲ್ಲಿಂದ ಎಲೀಷನು ಸಮಾರ್ಯಕ್ಕೆ ಹಿಂದಿರುಗಿ ಹೋದನು.
×

Alert

×