Bible Languages

Indian Language Bible Word Collections

Bible Versions

Books

2 Kings Chapters

2 Kings 13 Verses

Bible Versions

Books

2 Kings Chapters

2 Kings 13 Verses

1 ಯೆಹೂದದ ಅರಸನೂ ಅಹಜ್ಯನ ಮಗನೂ ಆದ ಯೆಹೋವಾಷನ ಆಳ್ವಿಕೆಯ ಇಪ್ಪತ್ತಮೂರನೆಯ ವರ್ಷದಲ್ಲಿ ಯೇಹುವಿನ ಮಗನಾದ ಯೆಹೋವಾಹಾಜನು ಸಮಾರ್ಯದಲ್ಲಿ ಇಸ್ರೇಲಿನ ರಾಜನಾದನು. ಯೆಹೋವಾಹಾಜನು ಹದಿನೇಳು ವರ್ಷ ಆಳಿದನು.
2 ಯೆಹೋವನು ತಪ್ಪೆಂದು ಹೇಳಿದ ಕಾರ್ಯಗಳನ್ನು ಯೆಹೋವಾಹಾಜನು ಮಾಡಿದನು. ಇಸ್ರೇಲರನ್ನು ಪಾಪಮಾಡುವಂತೆ ಪ್ರೇರೇಪಿಸಿದ ನೆಬಾಟನ ಮಗನಾದ ಯಾರೊಬ್ಬಾಮನ ಪಾಪಗಳನ್ನೂ ಯೆಹೋವಾಹಾಜನು ಅನುಸರಿಸುತ್ತಲೇ ಹೋದನು.
3 ಆಗ ಯೆಹೋವನು ಇಸ್ರೇಲಿಗೆ ವಿರುದ್ಧವಾಗಿ ಕೋಪಗೊಂಡು ಅರಾಮ್ಯರ ರಾಜನಾದ ಹಜಾಯೇಲನ ಮತ್ತು ಅವನ ಮಗನಾದ ಬೆನ್ಹದದನ ಅಧೀನಕ್ಕೆ ಇಸ್ರೇಲನ್ನು ಒಪ್ಪಿಸಿದನು.
4 ಆಗ ಯೆಹೋವಾಹಾಜನು ಯೆಹೋವನಿಗೆ ಮೊರೆಯಿಟ್ಟನು. ಯೆಹೋವನು ಅವನ ಮೊರೆಯನ್ನು ಕೇಳಿ, ಅರಾಮ್ಯರ ರಾಜನಿಂದ ಬಾಧೆಗೆ ಒಳಗಾಗಿದ್ದ
5 ಇಸ್ರೇಲನ್ನು ರಕ್ಷಿಸಲು ಒಬ್ಬನನ್ನು ಯೆಹೋವನು ಕಳುಹಿಸಿದನು. ಇಸ್ರೇಲರು ಅರಾಮ್ಯದಿಂದ ಬಿಡುಗಡೆಗೊಂಡು ಸ್ವತಂತ್ರರಾದರು. ಇಸ್ರೇಲರು ತಮ್ಮ ಸ್ವಂತ ಮನೆಗಳಿಗೆ ಹಿಂದಿರುಗಿ ಸುರಕ್ಷಿತವಾಗಿ ವಾಸಿಸಿದರು.
6 ಆದರೂ ಇಸ್ರೇಲರು ಪಾಪಗಳನ್ನು ಮಾಡುವಂತೆ ಪ್ರೇರೇಪಿಸಿದ ಯಾರೊಬ್ಬಾಮನ ಕುಟುಂಬದ ಪಾಪಗಳನ್ನು ಮಾಡುವುದನ್ನು ಇಸ್ರೇಲರು ನಿಲ್ಲಿಸಲಿಲ್ಲ. ಇಸ್ರೇಲರು ಯಾರೊಬ್ಬಾಮನ ಪಾಪಗಳನ್ನು ಮಾಡುತ್ತಲೇ ಹೋದರು. ಅವರು ಸಮಾರ್ಯದಲ್ಲಿ ಅಶೇರ ವಿಗ್ರಹ ಸ್ತಂಭವನ್ನು ನೆಟ್ಟರು.
7 ಅರಾಮ್ಯರ ರಾಜನು ಯೆಹೋವಾಹಾಜನ ಸೇನೆಯನ್ನು ಸೋಲಿಸಿದನು. ಅರಾಮ್ಯರ ರಾಜನು ಐವತ್ತು ಮಂದಿ ರಾಹುತರನ್ನು, ಹತ್ತು ರಥಗಳನ್ನು ಮತ್ತು ಹತ್ತು ಸಾವಿರ ಭೂಸೈನಿಕರನ್ನು ಬಿಟ್ಟು ಉಳಿದವರೆಲ್ಲರನ್ನು ಸುಗ್ಗಿಯ ಕಾಲದಲ್ಲಿ ಗಾಳಿಗೆ ಹಾರಿಹೋಗುವ ಹೊಟ್ಟಿನಂತೆ ನಾಶಮಾಡಿದನು.
8 “ಇಸ್ರೇಲಿನ ರಾಜರುಗಳು ಇತಿಹಾಸ” ಎಂಬ ಪುಸ್ತಕದಲ್ಲಿ ಯೆಹೋವಾಹಾಜನು ಮಾಡಿದ ಇತರ ಮಹಾ ಕಾರ್ಯಗಳನ್ನು ಕುರಿತು ಬರೆಯಲಾಗಿದೆ.
9 ಯೆಹೋವಾಹಾಜನು ತೀರಿಕೊಂಡಾಗ ಅವನನ್ನು ಅವನ ಪೂರ್ವಿಕರ ಬಳಿ ಸಮಾರ್ಯದಲ್ಲಿ ಸಮಾಧಿಮಾಡಿದರು. ಯೆಹೋವಾಹಾಜನ ನಂತರ ಅವನ ಮಗನಾದ ಯೋವಾಷಾನು ನೂತನ ರಾಜನಾದನು.
10 ಯೆಹೂದದ ರಾಜನಾಗಿದ್ದ ಯೆಹೋವಾಷನ ಆಳ್ವಿಕೆಯ ಮೂವತ್ತೇಳನೆಯ ವರ್ಷದಲ್ಲಿ ಯೆಹೋವಾಹಾಜನ ಮಗನಾದ ಯೋವಾಷನು ಸಮಾರ್ಯದಲ್ಲಿ ಇಸ್ರೇಲಿನ ರಾಜನಾದನು. ಯೋವಾಷನು ಇಸ್ರೇಲನ್ನು ಹದಿನಾರು ವರ್ಷ ಆಳಿದನು.
11 ಯೆಹೋವನು ತಪ್ಪೆಂದು ಹೇಳಿದ ಕಾರ್ಯಗಳನ್ನು ಇಸ್ರೇಲಿನ ರಾಜನಾದ ಯೋವಾಷನು ಮಾಡಿದನು. ಇಸ್ರೇಲರು ಪಾಪಗಳನ್ನು ಮಾಡುವಂತೆ ಪ್ರೇರೇಪಿಸಿದ ನೆಬಾಟನ ಮಗನಾದ ಯಾರೊಬ್ಬಾಮನ ಪಾಪಗಳನ್ನು ಮತ್ತೆ ಮಾಡುವುದನ್ನು ಅವನು ನಿಲ್ಲಿಸಲಿಲ್ಲ.
12 ಯೋವಾಷಾನು ಮಾಡಿದ ಮಹಾ ಕಾರ್ಯಗಳನ್ನು ಮತ್ತು ಯೆಹೂದದ ರಾಜನಾದ ಅಮಚ್ಯನ ವಿರುದ್ಧವಾಗಿ ಅವನು ಮಾಡಿದ ಯುದ್ಧಗಳನ್ನು, “ಇಸ್ರೇಲರ ರಾಜರುಗಳ ಇತಿಹಾಸ” ಎಂಬ ಪುಸ್ತಕದಲ್ಲಿ ಬರೆಯಲಾಗಿದೆ.
13 ಯೋವಾಷಾನು ತೀರಿಕೊಂಡಾಗ ಅವನ ಪೂರ್ವಿಕರ ಬಳಿಯಲ್ಲಿ ಅವನನ್ನು ಸಮಾಧಿಮಾಡಿದರು. ಅನಂತರ ಯಾರೊಬ್ಬಾಮನು ಯೋವಾಷಾನ ಸಿಂಹಾಸನದ ಮೇಲೆ ಕುಳಿತುಕೊಂಡು ನೂತನ ರಾಜನಾದನು. ಯೋವಾಷನನ್ನು ಸಮಾರ್ಯದಲ್ಲಿ ಇಸ್ರೇಲಿನ ರಾಜರುಗಳ ಜೊತೆ ಸಮಾಧಿಮಾಡಿದರು.
14 ಎಲೀಷನು ಕಾಯಿಲೆ ಬಿದ್ದನು. ತರುವಾಯ, ಈ ಕಾಯಿಲೆಯಿಂದ ಎಲೀಷನು ಸತ್ತುಹೋದನು. ಇಸ್ರೇಲಿನ ರಾಜನಾದ ಯೋವಾಷಾನು ಎಲೀಷನ ಬಳಿಗೆ ಹೋದನು. ಯೋವಾಷನು ಎಲೀಷನಿಗಾಗಿ ಗೋಳಾಡಿದನು. ಯೋವಾಷನು “ನನ್ನ ತಂದೆಯೇ, ನನ್ನ ತಂದೆಯೇ, ದೇವರು ಬಂದು ನಿನ್ನನ್ನು ತೆಗೆದುಕೊಂಡು ಹೋಗಲು ಇದು ಸಕಾಲವೇ?” ಎಂದು ಹೇಳಿದನು.
15 ಎಲೀಷನು ಯೋವಾಷನಿಗೆ, “ಒಂದು ಬಿಲ್ಲು ಮತ್ತು ಕೆಲವು ಬಾಣಗಳನ್ನು ತೆಗೆದುಕೋ” ಎಂದು ಹೇಳಿದನು. ಯೋವಾಷನು ಒಂದು ಬಿಲ್ಲು ಮತ್ತು ಕೆಲವು ಬಾಣಗಳನ್ನು ತೆಗೆದುಕೊಂಡನು.
16 ಆಗ ಎಲೀಷನು ಇಸ್ರೇಲಿನ ರಾಜನಿಗೆ, “ಬಿಲ್ಲಿನ ಮೇಲೆ ನಿನ್ನ ಕೈಯನ್ನು ಇಡು” ಎಂದು ಹೇಳಿದನು. ಯೋವಾಷನು ತನ್ನ ಕೈಯನ್ನು ಬಿಲ್ಲಿನ ಮೇಲಿಟ್ಟನು. ನಂತರ ಎಲೀಷನು ತನ್ನ ಕೈಗಳನ್ನು ರಾಜನ ಕೈಗಳ ಮೇಲಿಟ್ಟನು.
17 ಎಲೀಷನು, “ಪೂರ್ವದಿಕ್ಕಿನ ಕಿಟಕಿಯನ್ನು ತೆಗೆ” ಎಂದು ಹೇಳಿದನು. ಯೋವಾಷನು ಕಿಟಕಿಯನ್ನು ತೆರೆದನು. ಆಗ ಎಲೀಷನು, “ಹೊಡಿ” ಎಂದನು. ಯೋವಾಷನು ಹೊಡೆದನು. ಆಗ ಎಲೀಷನು, “ಅದು ಯೆಹೋವನ ವಿಜಯದ ಬಾಣ! ಅರಾಮ್ಯರ ಮೇಲಿನ ವಿಜಯದ ಬಾಣ! ನೀನು ಅರಾಮ್ಯರನ್ನು ಅಫೇಕದಲ್ಲಿ ಸೋಲಿಸುವೆ. ನೀನು ಅವರನ್ನು ನಾಶಗೊಳಿಸುವೆ” ಎಂದು ಹೇಳಿದನು.
18 ಎಲೀಷನು, “ಬಾಣಗಳನ್ನು ತೆಗೆದುಕೊ” ಎಂದನು. ಯೋವಾಷನು ಬಾಣಗಳನ್ನು ತೆಗೆದುಕೊಂಡನು. ಆಗ ಎಲೀಷನು ಇಸ್ರೇಲಿನ ರಾಜನಿಗೆ, “ನೆಲದ ಮೇಲೆ ಹೊಡಿ” ಎಂದನು. ಯೋವಾಷನು ನೆಲವನ್ನು ಮೂರು ಸಲ ಹೊಡೆದನು. ನಂತರ ಅವನು ನಿಲ್ಲಿಸಿದನು.
19 ದೇವಮನುಷ್ಯನು (ಎಲೀಷನು) ಯೋವಾಷನ ಮೇಲೆ ಕೋಪಗೊಂಡು, “ನೀನು ಐದು ಅಥವಾ ಆರು ಸಲ ಹೊಡೆಯಬೇಕಾಗಿತ್ತು! ಆಗ ನೀನು ಅರಾಮ್ಯರನ್ನು ನಾಶಗೊಳಿಸುವವರೆಗೆ ಸೋಲಿಸಿ ಬಿಡಬಹುದಾಗಿತ್ತು! ಆದರೆ ಈಗ ನೀನು ಅರಾಮ್ಯರನ್ನು ಮೂರು ಸಲ ಮಾತ್ರ ಸೋಲಿಸುವೆ!” ಎಂದು ಹೇಳಿದನು.
20 ಎಲೀಷನು ತೀರಿಕೊಂಡಾಗ ಜನರು ಅವನನ್ನು ಸಮಾಧಿಮಾಡಿದರು. ವಸಂತಮಾಸದ ಒಂದು ದಿನ, ಮೋವಾಬ್ಯ ಸೈನಿಕರ ಒಂದು ಗುಂಪು ಇಸ್ರೇಲಿಗೆ ಸುಲಿಗೆ ಮಾಡಲು ಬಂದಿತು.
21 ಇಸ್ರೇಲರಲ್ಲಿ ಕೆಲವರು ಸತ್ತವನೊಬ್ಬನನ್ನು ಸಮಾಧಿ ಮಾಡುತ್ತಿರುವಾಗ ಸೈನಿಕರ ಆ ಗುಂಪನ್ನು ನೋಡಿ ಸತ್ತವನನ್ನು ಎಲೀಷನ ಸಮಾಧಿಯಲ್ಲಿ ಎಸೆದು ಓಡಿಹೋದರು. ಎಲೀಷನ ಮೂಳೆಗಳನ್ನು ಸತ್ತವನು ಸ್ಪರ್ಶಿಸಿದ ತಕ್ಷಣ, ಸತ್ತ ಮನುಷ್ಯನಿಗೆ ಜೀವ ಬಂದು, ಅವನು ತನ್ನ ಕಾಲುಗಳ ಮೇಲೆ ನಿಂತುಕೊಂಡನು!
22 ಯೆಹೋವಾಹಾಜನು ಆಳುತ್ತಿದ್ದ ದಿನಗಳಲ್ಲೆಲ್ಲಾ ಅರಾಮ್ಯರ ರಾಜನಾದ ಹಜಾಯೇಲನು ಇಸ್ರೇಲಿಗೆ ತೊಂದರೆ ಕೊಡುತ್ತಿದ್ದನು.
23 ಆದರೆ ಯೆಹೋವನು ಇಸ್ರೇಲರಿಗೆ ದಯಾಪರನಾಗಿದ್ದನು. ಯೆಹೋವನು ಕರುಣೆಯಿಂದ ಇಸ್ರೇಲರಿಗೆ ಅಭಿಮುಖನಾದನು. ಏಕೆಂದರೆ ಆತನು ಅಬ್ರಹಾಮನೊಂದಿಗೆ ಇಸಾಕನೊಂದಿಗೆ ಮತ್ತು ಯಾಕೋಬನೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದನು. ಯೆಹೋವನು ಇಸ್ರೇಲರನ್ನು ನಾಶಗೊಳಿಸಲಿಲ್ಲ. ಅವರನ್ನು ಇನ್ನೂ ತಳ್ಳಿಬಿಟ್ಟಿರಲಿಲ್ಲ.
24 ಅರಾಮ್ಯರ ರಾಜನಾದ ಹಜಾಯೇಲನು ಸತ್ತಮೇಲೆ ಬೆನ್ಹದದನು ನೂತನ ರಾಜನಾದನು.
25 ಹಜಾಯೇಲನು ಸಾಯುವುದಕ್ಕೆ ಮೊದಲು, ಯೋವಾಷನ ತಂದೆಯಾದ ಯೆಹೋವಾಹಾಜನಿಂದ ಯುದ್ಧದಲ್ಲಿ ಕೆಲವು ನಗರಗಳನ್ನು ಮತ್ತೆ ವಶಪಡಿಸಿಕೊಂಡನು. ಆದರೆ ಈಗ ಯೋವಾಷನು ಹಜಾಯೇಲನ ಮಗನಾದ ಬೆನ್ಹದದನಿಂದ ಈ ನಗರಗಳನ್ನು ವಶಪಡಿಸಿಕೊಂಡನು. ಯೋವಾಷಾನು ಬೆನ್ಹದದನನ್ನು ಮೂರು ಸಲ ಸೋಲಿಸಿ ಇಸ್ರೇಲಿನ ನಗರಗಳನ್ನು ವಶಪಡಿಸಿಕೊಂಡನು.

2-Kings 13:2 Kannada Language Bible Words basic statistical display

COMING SOON ...

×

Alert

×