ಯೆಹೋವಾಷನು ಯೆಹೋವನು ಸರಿಯೆಂದು ಹೇಳಿದ ಕಾರ್ಯಗಳನ್ನು ಮಾಡಿದನು. ಯೆಹೋವಾಷನು ತನ್ನ ಜೀವಮಾನವೆಲ್ಲ ಯೆಹೋವನಿಗೆ ವಿಧೇಯನಾಗಿದ್ದನು. ಯಾಜಕನಾದ ಯೆಹೋಯಾದಾವನು ಉಪದೇಶಿಸಿದ್ದ ಕಾರ್ಯಗಳನ್ನೆಲ್ಲ ಯೆಹೋವಾಷನು ಮಾಡಿದನು.
(4-5) ಯೆಹೋವಾಷನು ಯಾಜಕರಿಗೆ, “ದೇವಾಲಯದಲ್ಲಿ ಬಹಳ ಹಣವಿದೆ. ಜನರು ಅನೇಕ ವಸ್ತುಗಳನ್ನು ಆಲಯಕ್ಕೆ ಕೊಟ್ಟಿದ್ದಾರೆ. ಜನಗಣತಿಯಲ್ಲಿ ಲೆಕ್ಕಿಸಲ್ಪಟ್ಟ ಜನರು ಆಲಯದ ತೆರಿಗೆಯನ್ನು ಕೊಟ್ಟಿದ್ದಾರೆ. ಜನರು ತಮ್ಮ ಸ್ವ ಇಚ್ಛೆಯಿಂದ ಹಣವನ್ನು ಕೊಟ್ಟಿದ್ದಾರೆ. ಯಾಜಕರಾದ ನೀವು ಆ ಹಣವನ್ನು ತೆಗೆದುಕೊಂಡು, ಯೆಹೋವನ ಆಲಯವನ್ನು ಸರಿಪಡಿಸಿ. ಪ್ರತಿಯೊಬ್ಬ ಯಾಜಕನೂ ತಾನು ಜನರ ಸೇವೆಯಿಂದ ಪಡೆದ ಹಣವನ್ನು ಉಪಯೋಗಿಸಲೇಬೇಕು. ಅವನು ಆ ಹಣವನ್ನು ದೇವಾಲಯದ ಶಿಥಿಲತೆಯನ್ನು ಸರಿಪಡಿಸಲು ಉಪಯೋಗಿಸಲೇಬೇಕು” ಎಂದು ಹೇಳಿದನು.
ಆದ್ದರಿಂದ ರಾಜನಾದ ಯೆಹೋವಾಷನು ಯಾಜಕನಾದ ಯೆಹೋಯಾದಾವ ಮತ್ತು ಇತರ ಯಾಜಕರನ್ನು ಕರೆಸಿ, “ನೀವು ಆಲಯವನ್ನು ಸರಿಪಡಿಸಲಿಲ್ಲವೇಕೆ? ನಿಮ್ಮಿಂದ ಸೇವೆ ಹೊಂದುವ ಜನರು ಕೊಡುವ ಹಣವನ್ನು ಉಪಯೋಗಿಸಬೇಡಿ. ಆಲಯವನ್ನು ಸರಿಪಡಿಸುವುದಕ್ಕಾಗಿ ಆ ಹಣವನ್ನು ಉಪಯೋಗಿಸಬೇಕು” ಎಂದು ಹೇಳಿದನು.
ಯಾಜಕನಾದ ಯೆಹೋಯಾದಾವನು ಒಂದು ಪೆಟ್ಟಿಗೆಯನ್ನು ತೆಗೆದುಕೊಂಡು, ಅದರ ಮೇಲೆ ಒಂದು ರಂಧ್ರ ಮಾಡಿದನು. ನಂತರ ಯೆಹೋಯಾದಾವನು ಆ ಪೆಟ್ಟಿಗೆಯನ್ನು ಯಜ್ಞವೇದಿಕೆಯ ಬಲಗಡೆಯಲ್ಲಿ ಇಟ್ಟನು. ದೇವಾಲಯಕ್ಕೆ ಜನರು ಬರುವ ಬಾಗಿಲಿನಲ್ಲಿ ಈ ಪೆಟ್ಟಿಗೆಯಿತ್ತು. ಕೆಲವು ಮಂದಿ ಯಾಜಕರು ಆಲಯದ ಬಾಗಿಲಿನಲ್ಲಿ ರಕ್ಷಕರಾಗಿ ನಿಂತರು. ಆ ಯಾಜಕರು ಜನರು ಯೆಹೋವನಿಗೆಂದು ಕೊಡುವ ಆ ಹಣವನ್ನು ಪೆಟ್ಟಿಗೆಯಲ್ಲಿ ಹಾಕಿದರು.
ಜನರು ದೇವಾಲಯಕ್ಕೆ ಹೋದಾಗ ಆ ಪೆಟ್ಟಿಗೆಯಲ್ಲಿ ಹಣವನ್ನು ಹಾಕಲಾರಂಭಿಸಿದರು. ರಾಜನ ಕಾರ್ಯದರ್ಶಿಯಾಗಲಿ ಪ್ರಧಾನಯಾಜಕನಾಗಲಿ ನೋಡಿದಾಗ ಸಾಕಷ್ಟು ಹಣವು ತುಂಬಿದ್ದರೆ ಅದನ್ನು ಲೆಕ್ಕಹಾಕಿ ಚೀಲಗಳಲ್ಲಿ ತುಂಬಿಡುತ್ತಿದ್ದರು.
ಕಲ್ಲುಕುಟಿಕರಿಗೂ ಶಿಲ್ಪಿಗಳಿಗೂ ಸಂಬಳ ಕೊಡುತ್ತಿದ್ದರು. ಅವರು ಆ ಹಣದಿಂದ ಮರವನ್ನೂ ಕೆತ್ತಿದ ಕಲ್ಲುಗಳನ್ನೂ ಕೊಂಡುಕೊಂಡರು; ಯೆಹೋವನ ಆಲಯವನ್ನು ಸರಿಪಡಿಸಲು ಇತರ ಕೆಲಸಗಳಿಗೆ ಆ ಹಣವನ್ನು ಬಳಸುತ್ತಿದ್ದರು.
(13-14) ಜನರು ದೇವಾಲಯಕ್ಕೆ ಹಣವನ್ನು ಕೊಟ್ಟರು. ಆದರೆ ಯಾಜಕರು ಆ ಹಣವನ್ನು ಬೆಳ್ಳಿಯ ಬಟ್ಟಲು, ಕತ್ತರಿ, ಬೋಗುಣಿ, ತುತ್ತೂರಿ ಅಥವಾ ಬೆಳ್ಳಿಬಂಗಾರಗಳ ಪಾತ್ರೆಗಳಿಗೆ ಉಪಯೋಗಿಸದೆ ಕೆಲಸಗಾರರ ವೇತನಕ್ಕೆ ಉಪಯೋಗಿಸಿದರು. ಆ ಕೆಲಸಗಾರರು ದೇವಾಲಯವನ್ನು ಸರಿಪಡಿಸಿದರು.
ಯೆಹೋಷಾಫಾಟ್, ಯೆಹೋರಾಮ್ ಮತ್ತು ಅಹಜ್ಯರು ಯೆಹೂದದ ರಾಜರಾಗಿದ್ದರು. ಅವರೆಲ್ಲ ಯೆಹೋವಾಷನ ಪೂರ್ವಿಕರು. ಅವರು ಅನೇಕ ವಸ್ತುಗಳನ್ನು ಯೆಹೋವನಿಗೆ ಕೊಟ್ಟಿದ್ದರು. ಅವುಗಳನ್ನೆಲ್ಲ ಆಲಯದಲ್ಲಿ ಇಟ್ಟಿದ್ದರು. ಯೆಹೋವಾಷನೂ ಯೆಹೋವನಿಗೆ ಅನೇಕ ವಸ್ತುಗಳನ್ನು ಕೊಟ್ಟಿದ್ದನು. ಯೆಹೋವಾಷನು ಅವುಗಳ ಜೊತೆಗೆ, ಆಲಯದಲ್ಲಿದ್ದ ಮತ್ತು ತನ್ನ ಮನೆಯಲ್ಲಿದ್ದ ಬಂಗಾರವನ್ನೆಲ್ಲ ತೆಗೆದುಕೊಂಡನು. ನಂತರ ಯೆಹೋವಾಷನು ಆ ಬೆಲೆಬಾಳುವ ವಸ್ತುಗಳನ್ನೆಲ್ಲ ಅರಾಮ್ಯರ ರಾಜನಾದ ಹಜಾಯೇಲನಿಗೆ ಕಳುಹಿಸಿದನು. ಆದ್ದರಿಂದ ಹಜಾಯೇಲನು ಜೆರುಸಲೇಮಿನ ವಿರುದ್ಧ ಯುದ್ಧಮಾಡದೆ ಹೊರಟುಹೋದನು.
ಶಿಮೆಯಾತನ ಮಗನಾದ ಯೋಜಾಕಾರನು ಮತ್ತು ಶೋಮೇರನ ಮಗನಾದ ಯೆಹೋದ್ವಾಾದನು ಯೆಹೋವಾಷನ ಅಧಿಕಾರಿಗಳಾಗಿದ್ದರು. ಅವರು ಯೆಹೋವಾಷನನ್ನು ಕೊಂದರು. ಜನರು ಯೆಹೋವಾಷನನ್ನು ದಾವೀದನಗರದಲ್ಲಿ ಅವನ ಪೂರ್ವಿಕರ ಬಳಿ ಸಮಾಧಿಮಾಡಿದರು. ಯೆಹೋವಾಷನ ನಂತರ ಅವನ ಮಗನಾದ ಅಮಚ್ಯನು ನೂತನ ರಾಜನಾದನು.