ತಮ್ಮಿಂದ ಸಾಧ್ಯವಾದಷ್ಟರ ಮಟ್ಟಿಗೆ ಕೊಟ್ಟಿದ್ದಾರೆಂದು ನಾನು ನಿಮಗೆ ಹೇಳುತ್ತೇನೆ. ಅವರು ತಮ್ಮ ಶಕ್ತಿಮೀರಿ ಕೊಟ್ಟಿದ್ದಾರೆ. ಅವರು ತಾವಾಗಿಯೇ ಕೊಟ್ಟರು. ಕೊಡಬೇಕೆಂದು ಅವರಿಗೆ ಯಾರೂ ಹೇಳಲಿಲ್ಲ.
ನೀವು ಪ್ರತಿಯೊಂದರಲ್ಲಿಯೂ ಅಂದರೆ, ನಂಬಿಕೆಯಲ್ಲಿ, ಮಾತಾಡುವುದರಲ್ಲಿ, ಜ್ಞಾನದಲ್ಲಿ, ಸಹಾಯಮಾಡಬೇಕೆಂಬ ಆಸಕ್ತಿಯಲ್ಲಿ ಮತ್ತು ನಮ್ಮಿಂದ ಕಲಿತುಕೊಂಡ ಪ್ರೀತಿಯಲ್ಲಿ ಶ್ರೀಮಂತರಾಗಿದ್ದೀರಿ. ಆದ್ದರಿಂದ ಕೃಪಾಕಾರ್ಯದಲ್ಲಿಯೂ ನೀವು ಶ್ರೀಮಂತರಾಗಿರಬೇಕೆಂದು ನಾವು ಬಯಸುತ್ತೇವೆ.
ನೀವು ಕೊಡಬೇಕೆಂದು ನಾನು ಆಜ್ಞಾಪಿಸುತ್ತಿಲ್ಲ. ಆದರೆ ನಿಮ್ಮ ಪ್ರೀತಿಯು ನಿಜವಾದ ಪ್ರೀತಿಯೇ ಎಂಬುದನ್ನು ನಾನು ನೋಡಬಯಸುತ್ತೇನೆ. ಸಹಾಯ ಮಾಡಲು ಇತರ ಜನರಿಗಿರುವ ನಿಜವಾದ ಬಯಕೆಯನ್ನು ನಿಮಗೆ ತೋರಿಸುವುದರ ಮೂಲಕವಾಗಿ ನಾನು ನಿಮ್ಮನ್ನು ಪರೀಕ್ಷಿಸುತ್ತೇನೆ.
ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಕೃಪೆಯು ನಿಮಗೆ ಗೊತ್ತಿದೆ. ಕ್ರಿಸ್ತನು ದೇವರೊಂದಿಗೆ ಶ್ರೀಮಂತಿಕೆಯಲ್ಲಿದ್ದರೂ ನಿಮಗೋಸ್ಕರವಾಗಿ ಬಡವನಾದದ್ದು ನಿಮಗೆ ಗೊತ್ತಿದೆ. ನೀವು ಶ್ರೀಮಂತರಾಗಬೇಕೆಂದು ಕ್ರಿಸ್ತನು ಬಡವನಾದನು.
ನೀವು ಕೊಡಬೇಕೆಂದು ಕೊಟ್ಟರೆ ನಿಮ್ಮ ದಾನವು ಸ್ವೀಕೃತವಾಗುವುದು. ನಿಮ್ಮ ದಾನದ ಮೌಲ್ಯಮಾಪನವು ನೀವು ಏನನ್ನು ಹೊಂದಿದ್ದೀರಿ ಎಂಬುದರ ಮೇಲೆಯೇ ಹೊರತು ನೀವು ಏನನ್ನು ಹೊಂದಿಲ್ಲ ಎಂಬುದರ ಮೇಲೆ ಆಧಾರಗೊಂಡಿಲ್ಲ.
ಈಗ ನಿಮ್ಮಲ್ಲಿ ಬೇಕಾದಷ್ಟಿದೆ. ನಿಮ್ಮ ಈ ಸಮೃದ್ಧಿಯು ಇತರ ಜನರ ಕೊರತೆಯನ್ನು ನೀಗಿಸುವುದು. ಬಳಿಕ, ಅವರು ಸಮೃದ್ಧರಾಗಿರುವಾಗ ನಿಮ್ಮ ಕೊರತೆಯನ್ನು ನೀಗಿಸುವರು. ಹೀಗೆ ಎಲ್ಲರೂ ಸಮಾನರಾಗಿರುವರು.
ಇದಲ್ಲದೆ, ನಾವು ಈ ಸಹಾಯಧನವನ್ನು ತೆಗೆದುಕೊಂಡು ಹೋಗುವಾಗ ನಮ್ಮ ಸಂಗಡವಿರುವುದಕ್ಕಾಗಿ ಸಭೆಗಳವರು ಈ ಸಹೋದರನನ್ನು ಆಯ್ಕೆಮಾಡಿದ್ದಾರೆ. ದೇವರ ಮಹಿಮೆಗಾಗಿಯೂ ಮತ್ತು ಸಹಾಯ ಮಾಡಲು ನಿಜವಾಗಿ ಬಯಸುತ್ತೇವೆ ಎಂಬುದನ್ನು ತೋರಿಸುವುದಕ್ಕಾಗಿಯೂ ಈ ಸೇವಾಕಾರ್ಯವನ್ನು ಮಾಡುತ್ತಿದ್ದೇವೆ.
ಇದಲ್ಲದೆ, ಸಹಾಯ ಮಾಡಲು ಯಾವಾಗಲೂ ಸಿದ್ಧನಾಗಿರುವ ನಮ್ಮ ಸಹೋದರನನ್ನು ಅವರೊಂದಿಗೆ ಕಳುಹಿಸಿಕೊಡುತ್ತಿದ್ದೇವೆ. ಅವನು ಅನೇಕ ವಿಧದಲ್ಲಿ ತನ್ನನ್ನು ನಿರೂಪಿಸಿದ್ದಾನೆ. ಈಗ ಅವನಿಗೆ ನಿಮ್ಮಲ್ಲಿ ಹೆಚ್ಚು ಭರವಸೆ ಇರುವುದರಿಂದ ಮತ್ತಷ್ಟು ಸಹಾಯ ಮಾಡಲು ಬಯಸುತ್ತಾನೆ.
ನಾನು ತೀತನ ಬಗ್ಗೆ ಹೇಳುವುದೇನೆಂದರೆ, ಅವನು ನನ್ನ ಜೊತೆಕೆಲಸಗಾರನಾಗಿದ್ದಾನೆ. ನಿಮಗೆ ಸಹಾಯ ಮಾಡಲು ಅವನು ನನ್ನೊಂದಿಗೆ ಕೆಲಸ ಮಾಡುತ್ತಿದ್ದಾನೆ. ಇತರ ಸಹೋದರರ ಬಗ್ಗೆ ನಾನು ಹೇಳುವುದೇನೆಂದರೆ, ಅವರು ಸಭೆಗಳಿಂದ ಕುಳುಹಿಸಲ್ಪಟ್ಟವರಾಗಿದ್ದಾರೆ ಮತ್ತು ಕ್ರಿಸ್ತನಿಗೆ ಮಹಿಮೆಯನ್ನು ಉಂಟುಮಾಡುವಂಥವರಾಗಿದ್ದಾರೆ.
ಆದ್ದರಿಂದ ನಿಮ್ಮಲ್ಲಿ ನಿಜವಾಗಿಯೂ ಪ್ರೀತಿಯಿದೆ ಎಂಬುದನ್ನು ಈ ಜನರಿಗೆ ತೋರಿಸಿಕೊಡಿರಿ. ನಾವು ನಿಮ್ಮ ವಿಷಯದಲ್ಲಿ ಯಾಕೆ ಹೆಮ್ಮೆಪಡುತ್ತೇವೆಂಬುದನ್ನು ಇವರಿಗೆ ತೋರಿಸಿಕೊಡಿರಿ. ಆಗ ಎಲ್ಲಾ ಸಭೆಗಳವರು ಅದನ್ನು ನೋಡಲು ಸಾಧ್ಯವಾಗುವುದು.