ಅವನು ಎರಕಹೊಯ್ದ ದೊಡ್ಡ ಗಾತ್ರದ ನೀರಿನ ಪಾತ್ರೆಯನ್ನು ಮಾಡಿಸಿದನು. ಇದು ದುಂಡಾಕಾರವಾಗಿದ್ದು ಅದರ ಬಾಯಿಯ ಅಂಚಿನಿಂದ ಅಂಚಿಗೆ ಹತ್ತು ಮೊಳ ಅಗಲವಿತ್ತು; ಅದರ ಸುತ್ತಳತೆ ಮೂವತ್ತು ಮೊಳ; ಎತ್ತರ ಐದು ಮೊಳ.
ಆ ಬೃಹದಾಕಾರದ ಪಾತ್ರೆಯನ್ನು ಹನ್ನೆರಡು ದೊಡ್ಡ ಎರಕದ ಹೋರಿಗಳ ಮೇಲೆ ಇಡಲಾಗಿತ್ತು. ಇವುಗಳಲ್ಲಿ ಮೂರು ಹೋರಿಗಳು ಪೂರ್ವದ ಕಡೆಗೂ ಮೂರು ಹೋರಿಗಳು ಪಶ್ಚಿಮದ ಕಡೆಗೂ ಮೂರು ಹೋರಿಗಳು ಉತ್ತರದ ಕಡೆಗೂ ಮೂರು ಹೋರಿಗಳು ದಕ್ಷಿಣದ ಕಡೆಗೂ ಮುಖಮಾಡಿ ನಿಂತಿದ್ದವು. ಎಲ್ಲಾ ಹೋರಿಗಳು ಒಂದಕ್ಕೊಂದಕ್ಕೆ ಮತ್ತು ಮಧ್ಯಭಾಗಕ್ಕೆ ಹಿಮ್ಮುಖವಾಗಿ ನಿಂತುಕೊಂಡಿದ್ದವು.
ಸೊಲೊಮೋನನು ಹತ್ತು ಗಂಗಾಳಗಳನ್ನು ಮಾಡಿಸಿದನು. ಐದು ಗಂಗಾಳಗಳನ್ನು ತಾಮ್ರದ ನೀರಿನ ತೊಟ್ಟಿಯ ಬಲಗಡೆಯಲ್ಲಿಡಿಸಿದನು. ಉಳಿದ ಐದು ಗಂಗಾಳಗಳನ್ನು ಪಾತ್ರೆಯ ಎಡಗಡೆಯಲ್ಲಿಡಿಸಿದನು. ಈ ಗಂಗಾಳಗಳ ನೀರನ್ನು ಯಜ್ಞ ಮಾಡಲಿಕ್ಕಿರುವ ಪದಾರ್ಥಗಳನ್ನು ತೊಳೆಯುವದಕ್ಕಾಗಿ ಉಪಯೋಗಿಸಿದರು. ಯಾಜಕರು ಯಜ್ಞಗಳನ್ನು ಅರ್ಪಿಸುವ ಮೊದಲು ತಮ್ಮನ್ನು ಶುದ್ಧ ಮಾಡಿಕೊಳ್ಳುವದಕ್ಕಾಗಿ ದೊಡ್ಡ ತಾಮ್ರದ ಪಾತ್ರೆಯ ನೀರನ್ನು ಉಪಯೋಗಿಸುತ್ತಿದ್ದರು.
ಸೊಲೊಮೋನನು ಹತ್ತು ದೀಪಸ್ತಂಭಗಳನ್ನು ಬಂಗಾರದಿಂದ ಮಾಡಿಸಿದನು. ಮೊದಲೇ ತೋರಿಸಿದ ಮಾದರಿಯ ಮೇರೆಗೆ ದೀಪಸ್ತಂಭಗಳನ್ನು ಮಾಡಿಸಿದನು. ಇವುಗಳಲ್ಲಿ ಐದನ್ನು ದೇವಾಲಯದೊಳಗೆ ಬಲಗಡೆಯಲ್ಲಿಯೂ ಐದನ್ನು ಎಡಗಡೆಯಲ್ಲಿಯೂ ಇಡಿಸಿದನು.
ಅವನು ಹತ್ತು ಮೇಜುಗಳನ್ನು ಮಾಡಿಸಿ ಅವುಗಳಲ್ಲಿ ಐದನ್ನು ದೇವಾಲಯದ ಬಲಗಡೆಯಲ್ಲಿಯೂ ಉಳಿದ ಐದನ್ನು ಎಡಗಡೆಯಲ್ಲಿಯೂ ಇರಿಸಿದನು. ಅನಂತರ ಸೊಲೊಮೋನನು ನೂರು ಬಂಗಾರದ ಬೋಗುಣಿಗಳನ್ನು ಮಾಡಿಸಿದನು.
ಹೂರಾಮನು ಪಾತ್ರೆಗಳನ್ನೂ ಸಲಿಕೆಗಳನ್ನೂ ಬೋಗುಣಿಗಳನ್ನೂ [*ಬೋಗುಣಿ ರಕ್ತವನ್ನು ಚಿಮುಕಿಸುವುದಕ್ಕಾಗಿ ಇದನ್ನು ಉಪಯೋಗಿಸಲಾಗುತ್ತಿತ್ತು.] ಮತ್ತು ದೇವಾಲಯದ ಉಪಕರಣಗಳನ್ನೂ ಸೊಲೊಮೋನನು ಹೇಳಿದಂತೆಯೇ ಮಾಡಿ ಮುಗಿಸಿದನು.
ಆ ಜಾಲರಿಯಲ್ಲಿ ಸಿಕ್ಕಿಸಲು ನಾನೂರು ದಾಳಿಂಬೆಗಳನ್ನು ಮಾಡಿದನು. ಪ್ರತಿಯೊಂದು ಜಾಲರಿಯಲ್ಲಿ ಎರಡು ಸಾಲಾಗಿ ದಾಳಿಂಬೆಗಳನ್ನು ಸಿಕ್ಕಿಸಿಟ್ಟನು. ಈ ಜಾಲರಿಯು ಕಂಬದ ಮೇಲ್ಭಾಗವನ್ನು ಮುಚ್ಚಿತ್ತು.