ಅರಸನಾದ ಹಿಜ್ಕೀಯನು ಯೆಹೂದದವರಿಗೂ ಇಸ್ರೇಲರಿಗೂ ಎಫ್ರಾಯೀಮ್ ಮನಸ್ಸೆ ಪ್ರಾಂತ್ಯಗಳವರಿಗೂ ಸಂದೇಶ ಕಳುಹಿಸಿ, ಯೆಹೋವನ ಆಲಯಕ್ಕೆ ಬಂದು ಇಸ್ರೇಲಿನ ಯೆಹೋವ ದೇವರಿಗೆ ಪಸ್ಕ ಹಬ್ಬವನ್ನು ಆಚರಿಸುವಂತೆ ಅವರನ್ನೆಲ್ಲಾ ಆಮಂತ್ರಿಸಿದನು.
ಅದಕ್ಕೆ ಕಾರಣವೇನಂದರೆ, ನಿಯಮಿತ ದಿವಸದಲ್ಲಿ ಹಬ್ಬ ನಡೆಸಲು ಸಾಧ್ಯವಾಗಲಿಲ್ಲ. ಯಾಕಂದರೆ ಬೇಕಾದಷ್ಟು ಯಾಜಕರು ಆ ಪರಿಶುದ್ಧ ಸೇವೆಗಾಗಿ ತಮ್ಮನ್ನು ಸಿದ್ಧಪಡಿಸಿಕೊಂಡಿರಲಿಲ್ಲ. ಅಲ್ಲದೆ ಜೆರುಸಲೇಮಿನಲ್ಲಿಯೂ ಜನ ಸೇರಿ ಬರಲಿಲ್ಲ.
ನಿಮ್ಮ ತಂದೆಗಳೂ ಸಹೋದರರೂ ನಡೆದಂತೆ ನೀವೂ ನಡೆಯಬೇಡಿರಿ. ಅವರು ತಮ್ಮ ಪಿತೃಗಳ ದೇವರಾದ ಯೆಹೋವನಿಗೆ ವಿರೋಧವಾಗಿ ನಡೆದ ಕಾರಣ ಆತನು ಅವರನ್ನು ನಾಶನಕ್ಕೆ ಒಪ್ಪಿಸಿದನು. ಇದಕ್ಕೆ ನೀವೇ ಸಾಕ್ಷಿಗಳು.
ನಿಮ್ಮ ಪೂರ್ವಿಕರ ಹಾಗೆ ಮೊಂಡರಾಗಿರಬೇಡಿ. ನೀವು ಪೂರ್ಣಮನಸ್ಸಿನಿಂದ ದೇವರಿಗೆ ವಿಧೇಯರಾಗಿರಿ. ಆತನ ಶಾಶ್ವತವಾದ ಮಹಾಪವಿತ್ರಸ್ಥಳಕ್ಕೆ ಬನ್ನಿರಿ. ನಿಮ್ಮ ದೇವರಾದ ಯೆಹೋವನನ್ನು ಆರಾಧಿಸಿರಿ ಮತ್ತು ಆತನ ಸೇವೆ ಮಾಡಿರಿ. ಆಗ ನಿಮ್ಮ ಮೇಲಿರುವ ಆತನ ಕೋಪವು ಶಮನವಾಗುವುದು.
ನೀವು ಯೆಹೋವನಿಗೆ ವಿಧೇಯರಾದರೆ ನಿಮ್ಮ ಮಕ್ಕಳೂ ಬಂಧುಗಳೂ ತಮ್ಮನ್ನು ಸೆರೆಹಿಡಿದವರಿಂದ ಕರುಣೆಯನ್ನು ಹೊಂದಿ ಮತ್ತೆ ಈ ದೇಶಕ್ಕೆ ಬರುವರು. ದೇವರಾದ ಯೆಹೋವನು ದಯೆಯೂ ಕರುಣೆಯೂ ಉಳ್ಳವನಾಗಿದ್ದಾನೆ. ನೀವು ಆತನ ಕಡೆಗೆ ತಿರುಗಿದರೆ ಆತನು ನಿಮ್ಮನ್ನು ತಳ್ಳಿಬಿಡುವುದಿಲ್ಲ.”
ಆ ಜನರು ಜೆರುಸಲೇಮಿನೊಳಗಿದ್ದ ಅನ್ಯ ದೇವರುಗಳಿಗಾಗಿ ಮಾಡಿದ್ದ ಯಜ್ಞವೇದಿಕೆಗಳನ್ನು ಕೆಡವಿಹಾಕಿದರು; ವಿಗ್ರಹಗಳಿಗೆ ಧೂಪಸಮರ್ಪಣೆಗಾಗಿ ಮಾಡಿದ ವೇದಿಕೆಗಳನ್ನೂ ಹಾಳುಗೆಡವಿದರು. ಅವುಗಳನ್ನೆಲ್ಲಾ ಕಿದ್ರೋನ್ ಕಣಿವೆಯಲ್ಲಿ ಬಿಸಾಡಿದರು.
ಆ ಬಳಿಕ ಎರಡನೆಯ ತಿಂಗಳಿನ ಹದಿನಾಲ್ಕನೆಯ ದಿವಸದಲ್ಲಿ ಪಸ್ಕದ ಕುರಿಮರಿಯನ್ನು ಕೊಯ್ದರು. ಯಾಜಕರೂ ಲೇವಿಯರೂ ನಾಚಿಕೆಯಿಂದ ತಮ್ಮನ್ನು ಸೇವೆಗಾಗಿ ಸಿದ್ಧಪಡಿಸಿಕೊಂಡು ಸರ್ವಾಂಗಹೋಮಕ್ಕಾಗಿ ಕಾಣಿಕೆಗಳನ್ನು ಯೆಹೋವನ ಮಂದಿರಕ್ಕೆ ತಂದರು.
ಮೋಶೆಯ ಕಟ್ಟಳೆಯ ಪ್ರಕಾರವಾಗಿ ಅವರು ತಮ್ಮತಮ್ಮ ಸ್ಥಾನಗಳಲ್ಲಿ ನಿಂತುಕೊಂಡು ಸೇವೆ ನಡಿಸಿದರು. ಲೇವಿಯರು ರಕ್ತವನ್ನು ಯಾಜಕರಿಗೆ ಕೊಟ್ಟರು. ಯಾಜಕರು ಆ ರಕ್ತವನ್ನು ವೇದಿಕೆಯ ಮೇಲೆ ಚಿಮಿಕಿಸಿದರು.
ಜನಸಮೂಹದವರಲ್ಲಿ ಎಷ್ಟೋ ಮಂದಿ ಪವಿತ್ರ ಸೇವೆಗಾಗಿ ತಮ್ಮನ್ನು ಸಿದ್ಧಮಾಡಿಕೊಂಡಿರಲಿಲ್ಲ. ಆದ್ದರಿಂದ ಪಸ್ಕದ ಕುರಿಯನ್ನು ಅವರು ವಧಿಸಲಾಗಲಿಲ್ಲ. ಲೇವಿಯರೇ ಅವರ ಬದಲಾಗಿ ಪಸ್ಕದ ಕುರಿಯನ್ನು ವಧಿಸಿದರು. ಹೀಗೆ ಲೇವಿಯರು ಪ್ರತಿಯೊಂದು ಕುರಿಯನ್ನು ದೇವರಿಗಾಗಿ ಪರಿಶುದ್ಧಗೊಳಿಸಿ ಸಮರ್ಪಿಸಿದರು.
ಇಸ್ರೇಲರು ಜೆರುಸಲೇಮಿನಲ್ಲಿ ಹುಳಿ ಇಲ್ಲದ ರೊಟ್ಟಿಯ ಹಬ್ಬವನ್ನು ಏಳು ದಿವಸಗಳ ತನಕ ಆಚರಿಸಿದರು. ಅವರೆಲ್ಲಾ ಹರ್ಷದಿಂದ ತುಂಬಿ ಹಬ್ಬವನ್ನು ಆಚರಿಸಿದರು. ಯಾಜಕರೂ ಲೇವಿಯರೂ ಪ್ರತಿದಿನ ಗಟ್ಟಿಯಾಗಿ ಸ್ತುತಿಗೀತೆಗಳನ್ನು ಹಾಡಿದರು.
ದೇವರ ಸೇವೆ ಮಾಡುವದನ್ನು ತಿಳಿದಿದ್ದ ಲೇವಿಯರನ್ನು ಹಿಜ್ಕೀಯನು ಪ್ರೋತ್ಸಾಹಿಸಿದನು. ಜನರು ಏಳು ದಿವಸ ಹಬ್ಬವನ್ನು ಆಚರಿಸಿ ಸಮಾಧಾನಯಜ್ಞವನ್ನು ಸಮರ್ಪಿಸಿದರು; ತಮ್ಮ ಪೂರ್ವಿಕರ ದೇವರಾದ ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡಿದರು.
ಯೆಹೂದದ ಅರಸನಾದ ಹಿಜ್ಕೀಯನು ಸೇರಿಬಂದ ಜನರಿಗೆ ಒಂದು ಸಾವಿರ ಹೋರಿಗಳನ್ನೂ ಏಳು ಸಾವಿರ ಕುರಿಗಳನ್ನೂ ವಧಿಸಿ ತಿನ್ನಲು ಕೊಟ್ಟನು. ಪ್ರಧಾನರು ಒಂದು ಸಾವಿರ ಹೋರಿಗಳನ್ನೂ ಹತ್ತು ಸಾವಿರ ಕುರಿಗಳನ್ನೂ ಸೇರಿಬಂದ ಜನರಿಗೆ ಕೊಟ್ಟರು. ಎಷ್ಟೋ ಮಂದಿ ಯಾಜಕರು ಪವಿತ್ರ ಸೇವೆಗೆ ತಮ್ಮನ್ನು ಶುದ್ಧಪಡಿಸಿಕೊಂಡರು.