ಜೆರುಸಲೇಮಿನಲ್ಲಿರುವ ಮೋರೀಯಾ ಬೆಟ್ಟದ ಮೇಲೆ ಸೊಲೊಮೋನನು ದೇವಾಲಯವನ್ನು ಕಟ್ಟಲು ಪ್ರಾರಂಭಿಸಿದನು. ಅದೇ ಸ್ಥಳದಲ್ಲಿ ಸೊಲೊಮೋನನ ತಂದೆಯಾದ ದಾವೀದನಿಗೆ ಯೆಹೋವನು ದರ್ಶನ ಕೊಟ್ಟಿದ್ದನು. ಅದು ಯೆಬೂಸಿಯನಾದ ಒರ್ನಾನನ ಕಣವಾಗಿತ್ತು. ಆಲಯವನ್ನು ಕಟ್ಟಲು ದಾವೀದನು ಆ ಸ್ಥಳವನ್ನು ತಯಾರು ಮಾಡಿದ್ದನು.
ದೊಡ್ಡ ಕೋಣೆಯ ಗೋಡೆಗೆ ಸೊಲೊಮೋನನು ತುರಾಯಿ ಮರದ ಹಲಗೆಗಳಿಂದ ಹೊದಿಸಿ ಅದರ ಮೇಲೆ ಬಂಗಾರದ ತಗಡನ್ನು ಹೊದಿಸಿದನು. ಅದರಲ್ಲಿ ಖರ್ಜೂರ ಮರಗಳೂ ಸರಪಣಿಗಳೂ ಬಂಗಾರದಿಂದ ಮಾಡಲ್ಪಟ್ಟು ಜೋಡಿಸಲ್ಪಟ್ಟಿದ್ದವು.
ದೇವಾಲಯದ ಗೋಡೆಯ ಒಳಭಾಗವನ್ನು ಸೊಲೊಮೋನನು ಬಂಗಾರದಿಂದ ಹೊದಿಸಿದನು ಮತ್ತು ಆಲಯದ ತೊಲೆ, ಹೊಸ್ತಿಲು, ಗೋಡೆ, ಕದ ಇವುಗಳನ್ನೂ ಬಂಗಾರದ ತಗಡಿನಿಂದ ಹೊದಿಸಿ, ಗೋಡೆಗಳ ಮೇಲೆ ಕೆರೂಬಿಗಳ ಚಿತ್ರವನ್ನು ಕೆತ್ತಿಸಿದನು.
ಸೊಲೊಮೋನನು ಮಹಾಪವಿತ್ರ ಸ್ಥಳವನ್ನು ತಯಾರಿಸಿದನು. ಅದು ಇಪ್ಪತ್ತು ಮೊಳ ಉದ್ದ ಮತ್ತು ಇಪ್ಪತ್ತು ಮೊಳ ಅಗಲವಿತ್ತು. ದೇವಾಲಯದ ಅಗಲದಷ್ಟೇ ಅದು ಅಗಲವಿತ್ತು. ಅದರ ಗೋಡೆಗಳನ್ನು ಅಪ್ಪಟ ಬಂಗಾರದ ತಗಡಿನಿಂದ ಹೊದಿಸಿದನು. ಆ ಬಂಗಾರವು ಇಪ್ಪತ್ತಮೂರು ಟನ್ ತೂಕವಿತ್ತು.
ಕೆರೂಬಿಗಳ ಒಂದೊಂದು ರೆಕ್ಕೆಯು ಐದೈದು ಮೊಳ ಉದ್ದವಿದ್ದವು. ರೆಕ್ಕೆಗಳ ಒಟ್ಟು ಉದ್ದ ಇಪ್ಪತ್ತು ಮೊಳ. ಕೆರೂಬಿಯ ಒಂದು ರೆಕ್ಕೆಯು ಗೋಡೆಗೆ ತಾಗಿತ್ತು; ಅದರ ಇನ್ನೊಂದು ರೆಕ್ಕೆಯು ಮತ್ತೊಂದು ಕೆರೂಬಿಯ ರೆಕ್ಕೆಯನ್ನು ತಾಗಿತ್ತು.