ಅಮಚ್ಯನು ಪಟ್ಟಕ್ಕೆ ಬಂದಾಗ ಇಪ್ಪತ್ತೈದು ವರ್ಷದವನಾಗಿದ್ದನು. ಅವನು ಜೆರುಸಲೇಮಿನಲ್ಲಿ ಇಪ್ಪತ್ತೊಂಭತ್ತು ವರ್ಷಗಳ ಕಾಲ ರಾಜ್ಯಭಾರ ಮಾಡಿದನು. ಅವನ ತಾಯಿಯ ಹೆಸರು ಯೆಹೋವದ್ದಾನ್. ಆಕೆ ಜೆರುಸಲೇಮಿನವಳು.
ಆದರೆ ಆ ಸೇವಕರ ಮಕ್ಕಳನ್ನು ಕೊಲ್ಲಿಸಲಿಲ್ಲ. ಯಾಕೆಂದರೆ ಮೋಶೆಯ ಧರ್ಮಶಾಸ್ತ್ರದ ಪ್ರಕಾರ, ಮಕ್ಕಳು ಮಾಡಿದ ಪಾಪಕ್ಕಾಗಿ ಅವರ ತಂದೆತಾಯಿಗಳಿಗೆ ಮರಣಶಿಕ್ಷೆಯನ್ನು ವಿಧಿಸಕೂಡದು; ತಂದೆತಾಯಿಗಳು ಮಾಡಿದ ಪಾಪಕ್ಕಾಗಿ ಅವರ ಮಕ್ಕಳಿಗೆ ಮರಣಶಿಕ್ಷೆಯನ್ನು ವಿಧಿಸಕೂಡದು. ಪಾಪ ಮಾಡಿದವರಿಗೇ ಮರಣಶಿಕ್ಷೆಯಾಗಬೇಕು.
ಅಮಚ್ಯನು ಯೆಹೂದ ಪ್ರಾಂತ್ಯದ ಜನರನ್ನು ಒಟ್ಟುಗೂಡಿಸಿ ಅವರನ್ನು ಕುಟುಂಬಗಳಿಗನುಸಾರವಾಗಿ ವಿಭಾಗ ಮಾಡಿದನು. ಈ ಗುಂಪುಗಳಿಗೆ ಸಹಸ್ರಾಧಿಪತಿಗಳನ್ನು ಮತ್ತು ಶತಾಧಿಪತಿಗಳನ್ನು ನೇಮಿಸಿದನು. ಇವರು ಯೆಹೂದ ಮತ್ತು ಬೆನ್ಯಾಮೀನ್ ಗೋತ್ರಗಳಲ್ಲಿ ಇಪ್ಪತ್ತು ವರ್ಷಕ್ಕಿಂತ ಮೇಲ್ಪಟ್ಟವರನ್ನು ಸೈನಿಕರನ್ನಾಗಿ ಆರಿಸಿದರು. ಒಟ್ಟು ಮೂರು ಲಕ್ಷ ಸೈನಿಕರು ಬರ್ಜಿ ಗುರಾಣಿಗಳೊಂದಿಗೆ ಯುದ್ಧ ಮಾಡಲು ನುರಿತರಾಗಿದ್ದರು.
ಆದರೆ ಒಬ್ಬ ದೇವರ ಮನುಷ್ಯನು ಅಮಚ್ಯನ ಬಳಿಗೆ ಬಂದು, “ಅರಸನೇ, ಇಸ್ರೇಲಿನ ಸೈನಿಕರು ನಿನ್ನೊಂದಿಗೆ ಯುದ್ಧಕ್ಕೆ ಹೋಗಲು ಬಿಡಬೇಡ. ಯೆಹೋವನು ಇಸ್ರೇಲರೊಂದಿಗೂ ಎಫ್ರಾಯೀಮಿನ ಜನರೊಂದಿಗೂ ಇರಲಿಲ್ಲ.
ಅಮಚ್ಯನು ಆ ದೇವರ ಮನುಷ್ಯನಿಗೆ, “ಹಾಗಾದರೆ, ನಾನು ಈಗಾಗಲೇ ಅವರಿಗೆ ಕೊಟ್ಟಿರುವ ಹಣಕ್ಕೇನು ಮಾಡಲಿ?” ಎಂದು ಕೇಳಿದನು. ದೇವರ ಮನುಷ್ಯನು ಉತ್ತರಿಸಿದ್ದೇನೆಂದರೆ, “ಯೆಹೋವನ ಬಳಿಯಲ್ಲಿ ಯಾವ ಕೊರತೆಯೂ ಇಲ್ಲ. ನಿನಗೆ ಅದಕ್ಕಿಂತ ಅಧಿಕವಾಗಿ ಕೊಡಲು ಆತನು ಶಕ್ತನಾಗಿದ್ದಾನೆ” ಎಂದು ಹೇಳಿದನು.
ಯೆಹೂದದ ಸೈನಿಕರು ಸೇಯೀರಿನ ಹತ್ತುಸಾವಿರ ಮಂದಿಯನ್ನು ಸೆರೆಹಿಡಿದರು. ಅವರನ್ನು ಒಂದು ಕಡಿದಾದ ಬೆಟ್ಟದ ಬದಿಗೊಯ್ದು ಅಲ್ಲಿಂದ ಅವರನ್ನು ಕೆಳಕ್ಕೆ ದೂಡಿದರು. ಅವರು ಕೆಳಗೆ ಬಂಡೆಗೆ ಅಪ್ಪಳಿಸಿದಾಗ ಅವರ ದೇಹಗಳು ಚೂರುಚೂರಾದವು.
ಅದೇ ಸಮಯದಲ್ಲಿ, ಇಸ್ರೇಲರ ಸೈನ್ಯವು ಯೆಹೂದದ ಕೆಲವು ಪಟ್ಟಣಗಳ ಮೇಲೆ ಧಾಳಿಮಾಡಿತು. ಅವರು ಬೇತ್ಹೋರೋನಿನಿಂದ ಹಿಡಿದು ಸಮಾರ್ಯದವರೆಗೆ ಇರುವ ಪಟ್ಟಣಗಳ ಮೇಲೆ ಧಾಳಿ ಮಾಡಿದರು. ಅವರು ಮೂರು ಸಾವಿರ ಜನರನ್ನು ಕೊಂದು ಬೆಲೆಬಾಳುವ ವಸ್ತುಗಳನ್ನು ತೆಗೆದುಕೊಂಡರು. ಅಮಚ್ಯನು ತನ್ನೊಂದಿಗೆ ಯುದ್ಧಕ್ಕೆ ಸೇರಿಸಿಕೊಳ್ಳದೆ ಇದ್ದದರಿಂದ ಆ ಸೈನಿಕರು ಕೋಪಗೊಂಡಿದ್ದರು.
ಎದೋಮ್ಯರನ್ನು ಸೋಲಿಸಿ ಅಮಚ್ಯನು ಮನೆಗೆ ಹಿಂದಿರುಗಿ ಬಂದನು. ಸೇಯೀರಿನ ಜನರು ಪೂಜಿಸುತ್ತಿದ್ದ ವಿಗ್ರಹಗಳನ್ನು ತನ್ನೊಂದಿಗೆ ತಂದನು. ಅವನು ಅವುಗಳನ್ನು ಪೂಜಿಸತೊಡಗಿ ಅಡ್ಡಬಿದ್ದು ಧೂಪ ಹಾಕಿದನು.
ಯೆಹೋವನು ಅಮಚ್ಯನ ಮೇಲೆ ಸಿಟ್ಟುಗೊಂಡನು. ಅವನ ಬಳಿಗೆ ಒಬ್ಬ ಪ್ರವಾದಿಯನ್ನು ಕಳುಹಿಸಿ ಅವನಿಗೆ, “ಅಮಚ್ಯನೇ, ಆ ಜನರು ಪೂಜಿಸುವ ವಿಗ್ರಹಗಳಿಗೇಕೆ ನೀನು ಪೂಜೆ ಮಾಡುವೆ? ತಮ್ಮನ್ನು ಪೂಜಿಸುವವರನ್ನು ಆ ದೇವರುಗಳು ನಿನ್ನಿಂದ ಕಾಪಾಡಲಾರದೆ ಹೋದವು” ಎಂದು ಹೇಳಿದನು.
ಆ ಪ್ರವಾದಿಯು ಈ ಮಾತುಗಳನ್ನು ಹೇಳಿದಾಗ ಅಮಚ್ಯನು, “ನಾವು ನಿನ್ನನ್ನು ಅರಸನ ಸಲಹೆಗಾರನನ್ನಾಗಿ ಮಾಡಲಿಲ್ಲವಲ್ಲಾ. ಆದ್ದರಿಂದ ಬಾಯಿಮುಚ್ಚಿಕೊಂಡು ಸುಮ್ಮನಿರು. ಇಲ್ಲದಿದ್ದರೆ ನೀನು ಸಾಯುವೆ” ಅಂದನು. ಆದರೆ ಅವನು, “ದೇವರು ನಿನ್ನನ್ನು ನಾಶಮಾಡಲು ನಿರ್ಧರಿಸಿದ್ದಾನೆ; ಯಾಕೆಂದರೆ ನೀನು ನನ್ನ ಸಲಹೆಯನ್ನು ಕೇಳದೆ ದುಷ್ಟತನ ಮಾಡುತ್ತಿರುವೆ?” ಎಂದು ಹೇಳಿದನು.
ಅಮಚ್ಯನು ತನ್ನ ಸಲಹೆಗಾರರೊಂದಿಗೆ ಆಲೋಚನೆ ನಡಿಸಿದನು. ಬಳಿಕ ಇಸ್ರೇಲರ ಅರಸನಾದ ಯೇಹುವಿನ ಮೊಮ್ಮಗನೂ ಯೆಹೋವಾಹಾಜನ ಮಗನೂ ಆದ ಯೋವಾಷನಿಗೆ, “ನಾವು ಮುಖಾಮುಖಿಯಾಗಿ ಸಂಧಿಸೋಣ” ಎಂಬ ಸಂದೇಶವನ್ನು ಕಳುಹಿಸಿದನು.
ಯೋವಾಷನು ಇಸ್ರೇಲಿನ ಅರಸನಾಗಿದ್ದನು. ಅವನು, “ಲೆಬನೋನಿನ ಒಂದು ಚಿಕ್ಕ ಮುಳ್ಳುಗಿಡವು ಲೆಬನೋನಿನ ದೇವದಾರು ಮರಕ್ಕೆ ಸಂದೇಶವನ್ನು ಕಳುಹಿಸಿತು. ಮುಳ್ಳುಗಿಡವು ಹೀಗೆ ಹೇಳಿತು: ‘ನಿನ್ನ ಮಗಳು ನನ್ನ ಮಗನನ್ನು ಮದುವೆ ಮಾಡಿಕೊಳ್ಳಲಿ.’ ಆದರೆ ಒಂದು ಕಾಡುಮೃಗ ಬಂದು ಮುಳ್ಳುಗಿಡವನ್ನು ತುಳಿದು ನಾಶಮಾಡಿತು.
ನೀನು ನಿನ್ನ ಮನಸ್ಸಿನಲ್ಲಿ, ‘ನಾನು ಎದೋಮನನ್ನು ಸೋಲಿಸಿದ್ದೇನೆ’ ಎಂದು ನೆನಸಿಕೊಂಡಿರಬಹುದು. ನೀನು ತುಂಬಾ ಹೆಮ್ಮೆಯುಳ್ಳವನಾಗಿ ಜಂಬ ಕೊಚ್ಚಿಕೊಳ್ಳುತ್ತಿರುವೆ. ಆದರೆ ನೀನು ಮನೆಯಲ್ಲಿಯೇ ಕುಳಿತುಕೊಳ್ಳುವುದು ಒಳ್ಳೆದು. ಸುಮ್ಮನೆ ತೊಂದರೆಗೆ ಸಿಕ್ಕಿಕೊಳ್ಳಬೇಡ. ನನ್ನೊಂದಿಗೆ ಯುದ್ಧ ಮಾಡಿದರೆ ಇಡೀ ಯೆಹೂದ ದೇಶವೇ ನಾಶವಾಗುವದು.” ಎಂದು ಬರೆದು ಕಳುಹಿಸಿದನು.
ಅಮಚ್ಯನು ಅವನ ಮಾತಿಗೆ ಲಕ್ಷ್ಯಕೊಡಲಿಲ್ಲ. ಇದು ದೇವರಿಂದಲೇ ಆಯಿತು. ಇಸ್ರೇಲ್ ಯೆಹೂದವನ್ನು ಸೋಲಿಸಬೇಕೆಂದು ದೇವರ ಇಚ್ಛೆಯಾಗಿತ್ತು. ಯಾಕೆಂದರೆ ಯೆಹೂದದ ಜನರು ಎದೋಮ್ಯರ ದೇವರುಗಳನ್ನು ಆರಾಧಿಸುತ್ತಿದ್ದರು.
ಯೋವಾಷನು ಬೇತ್ಷೆಮೆಷಿನಲ್ಲಿ ಅಮಚ್ಯನನ್ನು ಹಿಡಿದು ಜೆರುಸಲೇಮಿಗೆ ಕೊಂಡೊಯ್ದನು. ಅಮಚ್ಯನ ತಂದೆ ಯೆಹೋವಾಷನು. ಇವನು ಯೆಹೋವಹಾಜನ ಮಗ. ಯೋವಾಷನು ಜೆರುಸಲೇಮಿನ ಪೌಳಿಗೋಡೆಯಲ್ಲಿ ಆರುನೂರು ಅಡಿ ಗೋಡೆಯನ್ನು ಅಂದರೆ ಎಫ್ರಾಯೀಮ್ ಬಾಗಿಲಿನಿಂದ ಹಿಡಿದು ಮೂಲೆಬಾಗಿಲಿನವರೆಗೆ ಗೋಡೆಯನ್ನು ಕೆಡವಿಹಾಕಿದನು.
ಅಮಚ್ಯನು ದೇವರಾದ ಯೆಹೋವನನ್ನು ಆರಾಧಿಸುವದನ್ನು ಬಿಟ್ಟದ್ದಕ್ಕಾಗಿ ಜೆರುಸಲೇಮಿನ ಜನರು ಅವನನ್ನು ಕೊಲ್ಲಲು ಸಂಚುಮಾಡಿದರು. ಆಗ ಅವನು ಲಾಕೀಷಿಗೆ ಓಡಿಹೋದನು. ಆದರೆ ಜನರು ಕೆಲವರನ್ನು ಕಳುಹಿಸಿ ಅಲ್ಲಿಯೇ ಅವನನ್ನು ಕೊಲ್ಲಿಸಿದರು.