English Bible Languages

Indian Language Bible Word Collections

Bible Versions

English

Tamil

Hebrew

Greek

Malayalam

Hindi

Telugu

Kannada

Gujarati

Punjabi

Urdu

Bengali

Oriya

Marathi

Assamese

Books

2 Chronicles Chapters

2 Chronicles 21 Verses

1 ಯೆಹೋಷಾಫಾಟನು ಸತ್ತನು. ಅವನನ್ನು ಅವನ ಪೂರ್ವಿಕರೊಂದಿಗೆ ದಾವೀದನಗರದಲ್ಲಿ ಸಮಾಧಿಮಾಡಿದರು. ಅವನ ಮಗನಾದ ಯೆಹೋರಾಮನು ಪಟ್ಟಕ್ಕೆ ಬಂದನು.
2 ಯೆಹೋರಾಮನ ತಮ್ಮಂದಿರು ಯಾರೆಂದರೆ: ಅಜರ್ಯ, ಯೆಹೀಯೇಲ್, ಜೆಕರ್ಯ, ಅಜರ್ಯ, ಮೀಕಾಯೇಲ್ ಮತ್ತು ಶೆಫಟ್ಯ. ಇವರೆಲ್ಲಾ ಯೆಹೂದದ ರಾಜನಾಗಿದ್ದ ಯೆಹೋಷಾಫಾಟನ ಮಕ್ಕಳು.
3 ಯೆಹೋಷಾಫಾಟನು ತನ್ನ ಮಕ್ಕಳಿಗೆ ಅನೇಕ ಬೆಳ್ಳಿಬಂಗಾರದ ಮತ್ತು ಬೆಲೆಬಾಳುವ ವಸ್ತುಗಳನ್ನು ಉಡುಗೊರೆಯಾಗಿ ಕೊಟ್ಟನು. ಮಾತ್ರವಲ್ಲದೆ ಕೋಟೆಯಿಂದ ಭದ್ರಪಡಿಸಲ್ಪಟ್ಟ ಪಟ್ಟಣಗಳನ್ನು ಕೊಟ್ಟನು. ಆದರೆ ಯೆಹೂದ ರಾಜ್ಯವನ್ನು ತನ್ನ ಚೊಚ್ಚಲ ಮಗನಾದ ಯೆಹೋರಾಮನಿಗೆ ಕೊಟ್ಟನು.
4 ಯೆಹೋರಾಮನು ತನ್ನ ತಂದೆಯ ರಾಜ್ಯವನ್ನು ಪಡೆದುಕೊಂಡು ತನ್ನನ್ನು ಬಲಪಡಿಸಿಕೊಂಡನು. ನಂತರ ತನ್ನ ತಮ್ಮಂದಿರನ್ನೆಲ್ಲಾ ಖಡ್ಗದಿಂದ ಹತಿಸಿದನು. ಮಾತ್ರವಲ್ಲದೆ ಇಸ್ರೇಲಿನ ಕೆಲವು ಪ್ರಧಾನರನ್ನು ಕೊಲ್ಲಿಸಿದನು.
5 ಅವನು ಮೂವತ್ತೆರಡು ವರ್ಷದವನಾಗಿದ್ದಾಗ ಆಳಲು ಪ್ರಾರಂಭಿಸಿದನು. ಅವನು ಜೆರುಸಲೇಮಿನಲ್ಲಿ ಒಟ್ಟು ಎಂಟು ವರ್ಷ ಆಳಿದನು.
6 ಅವನು ಇಸ್ರೇಲಿನ ರಾಜರುಗಳು ವರ್ತಿಸಿದ ರೀತಿಯಲ್ಲಿ ಜೀವಿಸಿದನು. ಅಹಾಬನ ಕುಟುಂಬದವರು ಹೇಗೆ ಜೀವಿಸಿದರೋ ಹಾಗೆಯೇ ಜೀವಿಸಿದನು. ಯಾಕೆಂದರೆ ಅವನು ಅಹಾಬನ ಮಗಳನ್ನು ಮದುವೆಯಾಗಿದ್ದನು. ಯೆಹೋರಾಮನು ಯೆಹೋವನ ದೃಷ್ಟಿಯಲ್ಲಿ ಕೆಟ್ಟವನಾಗಿ ಜೀವಿಸಿದನು.
7 ಆದರೆ ಯೆಹೋವನು ದಾವೀದನೊಂದಿಗೆ ಮಾಡಿದ ಒಡಂಬಡಿಕೆಯ ನಿಮಿತ್ತ ಅವನನ್ನು ನಾಶಮಾಡಲಿಲ್ಲ. ಯೆಹೋವನು, “ದಾವೀದನ ಸಂತತಿಯವರ ಬೆಳಕು ಉರಿಯುತ್ತಲೇ ಇರುವದು” ಎಂದು ವಾಗ್ದಾನ ಮಾಡಿದ್ದನು.
8 ಯೆಹೋರಾಮನ ಆಳ್ವಿಕೆಯ ಸಮಯದಲ್ಲಿ ಎದೋಮ್ ಯೆಹೂದದ ಹಿಡಿತದಿಂದ ಬಿಡಿಸಿಕೊಂಡಿತು. ಎದೋಮಿನ ಪ್ರಜೆಗಳು ತಮ್ಮ ರಾಜನನ್ನು ತಾವೇ ಆರಿಸಿಕೊಂಡರು.
9 ಇದನ್ನರಿತ ಯೆಹೋರಾಮನು ತನ್ನ ರಥಬಲದೊಡನೆ ಎದೋಮಿಗೆ ಹೋದನು. ಅಲ್ಲಿ ಎದೋಮ್ಯರ ಸೈನ್ಯ ಇವರಿಗೆ ಮುತ್ತಿಗೆ ಹಾಕಿತು. ಆದರೆ ರಾತ್ರಿ ಸಮಯದಲ್ಲಿಯೇ ಯೆಹೋರಾಮನು ಅವರನ್ನು ಸೋಲಿಸಿದನು.
10 ಅಂದಿನಿಂದ ಇಂದಿನ ತನಕವೂ ಎದೋಮ್ ರಾಜ್ಯವು ಯೆಹೂದರಾಜ್ಯಕ್ಕೆ ಒಳಗಾಗಲೇ ಇಲ್ಲ. ಲಿಬ್ನ ಪಟ್ಟಣದ ಜನರೂ ಯೆಹೋರಾಮನಿಗೆ ಎದುರುನಿಂತರು. ತನ್ನ ಪೂರ್ವಿಕರು ಆರಾಧಿಸುತ್ತಿದ್ದ ದೇವರಾದ ಯೆಹೋವನನ್ನು ಯೆಹೋರಾಮನು ತೊರೆದುಬಿಟ್ಟಿದ್ದರಿಂದ ಇವೆಲ್ಲಾ ಅವನಿಗೆ ಸಂಭವಿಸಿದವು.
11 ಯೆಹೋರಾಮನು ಯೆಹೂದ ರಾಜ್ಯದ ಬೆಟ್ಟಗಳ ಮೇಲೆ ಪೂಜಾಸ್ಥಳಗಳನ್ನು ಕಟ್ಟಿಸಿದನು. ಪ್ರಜೆಗಳು ದೇವರ ಚಿತ್ತಕ್ಕನುಸಾರವಾಗಿ ನಡೆಯದಂತೆ ಅವರನ್ನು ಯೆಹೋವನಿಂದ ದೂರಕ್ಕೆ ನಡೆಸಿದನು.
12 ಪ್ರವಾದಿಯಾದ ಎಲೀಯನು ಯೆಹೋರಾಮನಿಗೆ ಈ ಸಂದೇಶವನ್ನು ಕಳುಹಿಸಿದನು: “ನಿನ್ನ ಪೂರ್ವಿಕನಾದ ದಾವೀದನ ದೇವರಾದ ಯೆಹೋವನ ಮಾತಿದು. ಆತನು ಹೇಳುವುದೇನೆಂದರೆ, ‘ಯೆಹೋರಾಮನೇ, ನೀನು ನಿನ್ನ ತಂದೆಯಾದ ಯೆಹೋಷಾಫಾಟನು ಜೀವಿಸಿದ್ದ ರೀತಿಯಲ್ಲಿ ಜೀವಿಸುತ್ತಿಲ್ಲ. ಯೆಹೂದದೇಶದ ಅರಸನಾದ ಆಸನು ಜೀವಿಸಿದ್ದ ರೀತಿಯಲ್ಲಿಯೂ ನೀನು ಜೀವಿಸುತ್ತಿಲ್ಲ.
13 ಇಸ್ರೇಲರ ರಾಜರುಗಳು ಜೀವಿಸಿದ್ದ ರೀತಿಯಲ್ಲಿ ನೀನು ಜೀವಿಸುತ್ತಿರುವೆ. ಯೆಹೂದ ದೇಶದಲ್ಲಿಯೂ ಜೆರುಸಲೇಮಿನಲ್ಲಿಯೂ ವಾಸಿಸುವ ಜನರು ನನ್ನ ಚಿತ್ತಕ್ಕನುಸಾರವಾಗಿ ಜೀವಿಸದಂತೆ ನೀನು ಮಾಡುತ್ತಿರುವೆ. ಅಹಾಬನೂ ಅವನ ಕುಟುಂಬದವರೂ ಹೀಗೆಯೇ ಮಾಡಿದರು. ಅವರು ದೇವರಿಗೆ ಅಪನಂಬಿಗಸ್ತರಾಗಿದ್ದರು. ನೀನು ನಿನ್ನ ತಮ್ಮಂದಿರನ್ನು ಕೊಂದುಹಾಕಿದೆ. ಅವರು ನಿನಗಿಂತಲೂ ಉತ್ತಮರಾಗಿದ್ದರು.
14 ಆದ್ದರಿಂದ ಯೆಹೋವನು ನಿನ್ನ ಜನರನ್ನು ಭಯಂಕರವಾದ ರೋಗದಿಂದ ದಂಡಿಸುವನು. ಆತನು ನಿನ್ನನ್ನೂ ನಿನ್ನ ಹೆಂಡತಿಮಕ್ಕಳನ್ನೂ ಆಸ್ತಿಪಾಸ್ತಿಯನ್ನೂ ಶಿಕ್ಷಿಸುವನು.
15 ನಿನ್ನ ಹೊಟ್ಟೆಯೊಳಗೆ ಭಯಂಕರವಾದ ಕಾಯಿಲೆ ಬರುವದು. ಅದು ದಿನದಿಂದ ದಿನಕ್ಕೆ ಹೆಚ್ಚುವುದು. ಆ ರೋಗದ ನಿಮಿತ್ತ ನಿನ್ನ ಕರುಳು ನಿನ್ನ ಹೊಟ್ಟೆಯಿಂದ ಹೊರಬೀಳುವದು.’ ”
16 ಫಿಲಿಷ್ಟಿಯರೂ ಇಥಿಯೋಪಿಯದವರ ಬಳಿಯಲ್ಲಿ ವಾಸವಾಗಿದ್ದ ಅರಬಿಯರೂ ಯೆಹೋರಾಮನ ಮೇಲೆ ಕೋಪಗೊಳ್ಳುವಂತೆ ಯೆಹೋವನು ಮಾಡಿದನು.
17 ಅವರು ಬಂದು ಯೆಹೂದದೇಶದ ಮೇಲೆ ಆಕ್ರಮಣ ಮಾಡಿದರು; ರಾಜನಿವಾಸದಲ್ಲಿದ್ದ ನಿಕ್ಷೇಪವನ್ನೆಲ್ಲಾ ಸೂರೆಮಾಡಿದರು. ಅಲ್ಲದೆ ಯೆಹೋರಾಮನ ಪತ್ನಿ, ಮಕ್ಕಳನ್ನೂ ಕೊಂಡೊಯ್ದರು. ಯೆಹೋರಾಮನ ಕೊನೆಯ ಮಗನು ಮಾತ್ರ ಉಳಿದನು. ಅವನ ಹೆಸರು ಯೆಹೋವಾಹಾಜ.
18 ಇದಾದ ಬಳಿಕ ಯೆಹೋವನು ಅವನ ಕರುಳಿನಲ್ಲಿ ಗುಣವಾಗದ ರೋಗ ಬರಮಾಡಿದನು.
19 ಎರಡು ವರ್ಷಗಳ ನಂತರ ಆ ರೋಗದ ನಿಮಿತ್ತ ಅವನ ಕರುಳುಗಳು ಹೊರಬಿದ್ದವು. ಅವನು ಬಹಳ ನೋವನ್ನು ಅನುಭವಿಸಿ ಸತ್ತನು. ಅವನು ಸತ್ತಾಗ ಅವನ ತಂದೆಗೆ ಧೂಪಹಾಕಿ ಗೌರವಿಸಿದಂತೆ ಯೆಹೋರಾಮನಿಗೆ ಮಾಡಲಿಲ್ಲ.
20 ಯೆಹೋರಾಮನು ಪಟ್ಟಕ್ಕೆ ಬಂದಾಗ ಮೂವತ್ತೆರಡು ವರ್ಷದವನಾಗಿದ್ದನು. ಅವನು ಎಂಟು ವರ್ಷ ಕಾಲ ಜೆರುಸಲೇಮಿನಲ್ಲಿ ಆಳಿದನು. ಅವನು ಸತ್ತಾಗ ಅವನಿಗೋಸ್ಕರ ಯಾರೂ ದುಃಖಪಡಲಿಲ್ಲ. ಜನರು ಅವನನ್ನು ದಾವೀದನಗರದಲ್ಲಿ ಸಮಾಧಿಮಾಡಿದರು. ಆದರೆ ರಾಜರ ಸಮಾಧಿ ಸ್ಥಳದಲ್ಲಿ ಅವನನ್ನು ಹೂಳಿಡಲಿಲ್ಲ.
×

Alert

×