ಯೆಹೋವನು ಯೆಹೋಷಾಫಾಟನೊಂದಿಗೆ ಇದ್ದನು; ಯಾಕೆಂದರೆ ಯೆಹೋಷಾಫಾಟನು ತನ್ನ ಯೌವನ ಕಾಲದಲ್ಲಿಯೆ ತನ್ನ ಪೂರ್ವಿಕನಾದ ದಾವೀದನಂತೆ ಯೆಹೋವನ ದೃಷ್ಟಿಯಲ್ಲಿ ಒಳ್ಳೆಯವನಾಗಿ ಜೀವಿಸಿದನು. ಅವನು ಬಾಳನ ಪೂಜೆಯನ್ನು ಮಾಡಲಿಲ್ಲ.
ಅವನ ಹೃದಯವು ಯೆಹೋವನ ಮಾರ್ಗಗಳಲ್ಲಿ ಆನಂದವನ್ನು ಕಂಡುಕೊಂಡಿತು. [*ಯೆಹೋವ … ಕೊಂಡಿತು ಅಕ್ಷರಶಃ, “ದೇವರ ಮಾರ್ಗಗಳಲ್ಲಿ ನಡೆಯಲು ಅವನು ಬಹಳ ಹೆಮ್ಮೆಯುಳ್ಳವನಾಗಿದ್ದನು.”] ಯೆಹೂದ ಪ್ರಾಂತ್ಯದಲ್ಲಿ ವಿಗ್ರಹಗಳ ಪೂಜಾಸ್ಥಳಗಳನ್ನೆಲ್ಲಾ ತೆಗೆದುಹಾಕಿಸಿ ಅಶೇರಸ್ತಂಭಗಳನ್ನು ಕಡಿದುಹಾಕಿಸಿ ಅವುಗಳನ್ನು ನಿರ್ಮೂಲ ಮಾಡಿದನು.
ತನ್ನ ಆಳ್ವಿಕೆಯ ಮೂರನೆಯ ವರ್ಷದಲ್ಲಿ ಯೆಹೂದದ ಎಲ್ಲಾ ಪಟ್ಟಣಗಳಿಗೆ ನಾಯಕರನ್ನು ಕಳುಹಿಸಿ ಜನರಿಗೆ ದೇವರ ವಿಧಿನಿಯಮಗಳು ಬೋಧಿಸಲ್ಪಡುವಂತೆ ಮಾಡಿದನು. ಆ ನಾಯಕರು ಯಾರೆಂದರೆ: ಬೆನ್ಹೈಲ್, ಓಬದ್ಯ, ಜೆಕರ್ಯನೆತನೇಲ್ ಮತ್ತು ಮೀಕಾಯ.
ಯೆಹೋಷಾಫಾಟನು ಅವರೊಂದಿಗೆ ಲೇವಿಯರನ್ನೂ ಕಳುಹಿಸಿದನು. ಅವರು ಯಾರೆಂದರೆ: ಶೆಮಾಯ, ನೆತನ್ಯ, ಜೆಬದ್ಯ, ಅಸಾಹೇಲ್, ಶೆಮೀರಾಮೋತ್, ಯೆಹೋನಾತಾನ್, ಅದೋನೀಯ ಮತ್ತು ಟೋಬೀಯ. ಅವರೊಂದಿಗೆ ಕಳುಹಿಸಲ್ಪಟ್ಟ ಯಾಜಕರು ಯಾರೆಂದರೆ: ಎಲೀಷಾಮಾ ಮತ್ತು ಯೆಹೋರಾಮ.
ಫಿಲಿಷ್ಟಿಯರಲ್ಲಿ ಕೆಲವರು ಅವನಿಗೆ ಬೆಳ್ಳಿಬಂಗಾರಗಳ ಕಾಣಿಕೆಗಳನ್ನು ತಂದುಕೊಟ್ಟರು; ಅವನೊಬ್ಬ ಬಲಿಷ್ಠನಾದ ರಾಜನೆಂದು ಅವರು ತಿಳಿದುಕೊಂಡಿದ್ದರು. ಅರಬಿಯದ ಜನರು ಯೆಹೋಷಾಫಾಟನಿಗೆ ಪಶುಗಳ ಹಿಂಡುಗಳನ್ನು ತಂದುಕೊಟ್ಟರು. ಅವುಗಳಲ್ಲಿ ಏಳು ಸಾವಿರದ ಏಳುನೂರು ಟಗರುಗಳು ಮತ್ತು ಏಳು ಸಾವಿರದ ಏಳುನೂರು ಹೋತಗಳು ಇದ್ದವು.