(1-2) ಓಬೇದನ ಮಗನಾದ ಅಜರ್ಯನ ಮೇಲೆ ದೇವರಾತ್ಮವು ಬಂದಿತು. ಅಜರ್ಯನು ಆಸನನ್ನು ಸಂಧಿಸಿ ಹೀಗೆ ಹೇಳಿದನು: “ಆಸನೇ, ನನ್ನ ಮಾತನ್ನು ಕೇಳು. ಯೆಹೂದದ ಜನರೇ, ಬೆನ್ಯಾಮೀನ್ ಜನರೇ, ನನ್ನ ಮಾತನ್ನು ಕೇಳಿರಿ. ನೀವು ಯೆಹೋವನೊಡನೆ ಇದ್ದರೆ ಆತನು ನಿಮ್ಮ ಸಂಗಡ ಇರುವನು. ನೀವು ಆತನನ್ನು ಹುಡುಕಿದರೆ ಆತನು ನಿಮಗೆ ಸಿಕ್ಕುವನು. ಆದರೆ ನೀವು ಆತನನ್ನು ತೊರೆದರೆ ಆತನು ನಿಮ್ಮನ್ನೂ ತೊರೆಯುವನು.
ಒಂದು ದೇಶವು ಇನ್ನೊಂದು ದೇಶವನ್ನು ನಾಶಮಾಡುತ್ತಿತ್ತು; ಒಂದು ಪಟ್ಟಣವು ಇನ್ನೊಂದು ಪಟ್ಟಣವನ್ನು ಸೂರೆಮಾಡುತ್ತಿತ್ತು. ಹೀಗೆ ದೇವರು ಎಲ್ಲ್ಲಾ ಬಗೆಯ ತೊಂದರೆಗಳಿಂದ ಅವರನ್ನು ತಳಮಳಗೊಳಿಸಿದನು.
ಪ್ರವಾದಿಯಾದ ಓಬೇದನು ತಂದ ಸಂದೇಶವನ್ನು ಆಸನು ಕೇಳಿ ತುಂಬಾ ಪ್ರೋತ್ಸಾಹಗೊಂಡನು. ಅನಂತರ ಯೆಹೂದ ಮತ್ತು ಬೆನ್ಯಾಮೀನ್ ಪ್ರಾಂತ್ಯದಲ್ಲಿದ್ದ ಎಲ್ಲಾ ವಿಗ್ರಹಗಳನ್ನು ತೆಗೆದುಹಾಕಿಸಿದನು. ಗೆದ್ದಿದ್ದ ಎಫ್ರಾಯೀಮ್ ಬೆಟ್ಟಪ್ರದೇಶಗಳಲ್ಲಿದ್ದ ವಿಗ್ರಹಗಳನ್ನು ತೆಗೆದುಹಾಕಿಸಿದನು. ದೇವಾಲಯದ ಮಂಟಪದೆದುರು ಇದ್ದ ಯೆಹೋವನ ಯಜ್ಞವೇದಿಕೆಯನ್ನು ಸರಿಪಡಿಸಿದನು.
ಆಮೇಲೆ ಆಸನು ಯೆಹೂದ ಮತ್ತು ಬೆನ್ಯಾಮೀನ್ ಪ್ರಾಂತ್ಯದ ಜನರನ್ನೆಲ್ಲಾ ಒಟ್ಟಾಗಿ ಸೇರಿಸಿದನು. ಅದೇ ಪ್ರಕಾರ ಅವನು ಇಸ್ರೇಲನ್ನು ಬಿಟ್ಟು ಯೆಹೂದದಲ್ಲಿ ನೆಲೆಸಲು ಬಂದಿದ್ದ ಎಫ್ರಾಯೀಮ್, ಮನಸ್ಸೆ ಮತ್ತು ಸಿಮೆಯೋನ್ ಪ್ರಾಂತ್ಯಗಳವರನ್ನೂ ಒಟ್ಟಾಗಿ ಸೇರಿಸಿದನು. ದೇವರಾದ ಯೆಹೋವನು ಆಸನ ಕೂಡ ಇರುವದನ್ನು ನೋಡಿ ಅವನೊಂದಿಗೆ ಸೇರಲು ಅನೇಕ ಜನರು ಬಂದಿದ್ದರು.
ಯಾವನಾದರೂ ದೇವರಾದ ಯೆಹೋವನ ಸೇವೆಮಾಡಲು ನಿರಾಕರಿಸುವದಾದರೆ ಆ ವ್ಯಕ್ತಿಯು ಗಂಡಸಾಗಿದ್ದರೂ ಹೆಂಗಸಾಗಿದ್ದರೂ ಮುಖ್ಯವಾದವನಾಗಿದ್ದರೂ ಮುಖ್ಯವಲ್ಲದವನಾಗಿದ್ದರೂ ಕೊಲ್ಲಲ್ಪಡಬೇಕು ಎಂಬುದಾಗಿ ಹೇಳಿದರು.
ಯೆಹೂದದ ಎಲ್ಲಾ ಜನರು ತಾವು ಯೆಹೋವನಿಗೆ ಮಾಡಿದ ಪ್ರಮಾಣದ ನಿಮಿತ್ತ ಸಂತೋಷಪಟ್ಟರು. ಯಾಕೆಂದರೆ ಅವರು ತಮ್ಮ ಪೂರ್ಣಹೃದಯದಿಂದ ಪ್ರಮಾಣಮಾಡಿದ್ದರು. ಅವರು ಯೆಹೋವನನ್ನು ಪೂರ್ಣಮನಸ್ಸಿನಿಂದ ಹಿಂಬಾಲಿಸಿದರು. ಅವರು ಆತನನ್ನು ಹುಡುಕಿದಾಗ ಆತನು ಅವರಿಗೆ ಪ್ರಸನ್ನನಾಗಿ ಅವರಿಗೆ ಸಮಾಧಾನವನ್ನು ಕೊಟ್ಟನು.
ಆಸನು ತನ್ನ ತಾಯಿಯಾದ ಮಾಕಳನ್ನು ರಾಜಮಾತೆ ಎಂಬ ಪದವಿಯಿಂದ ತಳ್ಳಿಬಿಟ್ಟನು. ಯಾಕೆಂದರೆ ಆಕೆಯು ಅಶೇರ್ ದೇವತೆಯ ಅಸಹ್ಯವಾದ ಕಂಬವನ್ನು ಮಾಡಿಸಿದ್ದಳು. ಆಸನು ಅದನ್ನು ಕಡಿದು ಚೂರುಚೂರಾಗಿ ಮಾಡಿಸಿದನು. ನಂತರ ಅದನ್ನು ಕಿದ್ರೋನ್ ಕಣಿವೆಯಲ್ಲಿ ಸುಟ್ಟುಬಿಟ್ಟನು.