ರೆಹಬ್ಬಾಮನ ಆಳ್ವಿಕೆಯ ಐದನೆಯ ವರ್ಷದಲ್ಲಿ ಶೀಶಕನು ಬಂದು ಪಟ್ಟಣಕ್ಕೆ ಮುತ್ತಿಗೆ ಹಾಕಿದನು. ಶೀಶಕನು ಈಜಿಪ್ಟಿನ ರಾಜ. ರೆಹಬ್ಬಾಮನೂ ಯೆಹೂದ ಪ್ರಾಂತ್ಯದ ಜನರೂ ಯೆಹೋವನಿಗೆ ಅವಿಧೇಯರಾದದ್ದೇ ಈ ಮುತ್ತಿಗೆಗೆ ಕಾರಣ.
ಶೀಶಕನ ಬಳಿಯಲ್ಲಿ ಹನ್ನೆರಡು ಸಾವಿರ ರಥಗಳು, ಅರವತ್ತುಸಾವಿರ ರಾಹುತರು ಮತ್ತು ಲೆಕ್ಕಿಸಲಾರದಷ್ಟು ಸೈನಿಕರು ಇದ್ದರು. ಅವನ ಆ ದೊಡ್ಡ ಸೈನ್ಯದಲ್ಲಿ ಲಿಬ್ಯ, ಇಥಿಯೋಪ್ಯ ಮತ್ತು ಸುಕ್ಕೀಯ ದೇಶದ ಸಿಪಾಯಿಗಳಿದ್ದರು.
ಆಗ ಪ್ರವಾದಿಯಾದ ಶೆಮಾಯನು, ಶೀಶಕನಿಗೆ ಹೆದರಿಕೊಂಡು ಜೆರುಸಲೇಮಿನಲ್ಲಿ ಒಟ್ಟಾಗಿ ಸೇರಿ ಬಂದಿದ್ದ ರೆಹಬ್ಬಾಮನ ಮತ್ತು ಇಸ್ರೇಲಿನ ಪ್ರಧಾನರ ಬಳಿಗೆ ಬಂದು, “ಯೆಹೋವನು ಹೇಳುವುದೇನೆಂದರೆ, ರೆಹಬ್ಬಾಮನೇ, ನೀನು ಮತ್ತು ಯೆಹೂದದ ಜನರು ನನ್ನನ್ನು ತೊರೆದಿದ್ದೀರಿ. ನನ್ನ ಕಟ್ಟಳೆಗಳನ್ನು ಅನುಸರಿಸಲು ನಿರಾಕರಿಸಿದ್ದೀರಿ. ಈಗ ನಾನು ನಿಮಗೆ ಸಹಾಯ ಮಾಡದೆ ಶೀಶಕನನ್ನು ಎದುರಿಸಲು ನಿಮ್ಮನ್ನು ಬಿಟ್ಟುಬಿಡುವೆನು” ಎಂದು ಹೇಳಿದನು.
ಅರಸನೂ ಯೆಹೂದದ ನಾಯಕರೂ ತನ್ನೆದುರಿನಲ್ಲಿ ತಗ್ಗಿಸಿಕೊಂಡದ್ದನ್ನು ಯೆಹೋವನು ನೋಡಿ ಶೆಮಾಯನ ಮೂಲಕ ಈ ಸಂದೇಶವನ್ನು ಕಳುಹಿಸಿದನು. “ಅರಸನೂ ನಾಯಕರೂ ತಮ್ಮನ್ನು ತಗ್ಗಿಸಿಕೊಂಡದ್ದರಿಂದ ನಾನು ಅವರನ್ನು ನಾಶಪಡಿಸದೆ ಬೇಗನೆ ರಕ್ಷಿಸುವೆನು. ಜೆರುಸಲೇಮಿನ ಮೇಲೆ ನನ್ನ ಕೋಪವು ಸುರಿಯುವಂತೆ ನಾನು ಶೀಶಕನನ್ನು ಉಪಯೋಗಿಸುವದಿಲ್ಲ.
ಶೀಶಕನು ಜೆರುಸಲೇಮಿನೊಳಗೆ ನುಗ್ಗಿ ದೇವಾಲಯದಲ್ಲಿಟ್ಟಿದ್ದ ಭಂಡಾರಗಳನ್ನೆಲ್ಲಾ ಸೂರೆಮಾಡಿದನು. ರಾಜನ ಅರಮನೆಯದಲ್ಲಿದ್ದ ವಸ್ತುಗಳನ್ನೂ ಸೊಲೊಮೋನನು ಮಾಡಿಸಿದ್ದ ಬಂಗಾರದ ಗುರಾಣಿಗಳನ್ನೂ ಸೂರೆಮಾಡಿ ತನ್ನ ದೇಶಕ್ಕೆ ಒಯ್ದನು.
ರೆಹಬ್ಬಾಮನು ಯೆಹೋವನ ಮುಂದೆ ತನ್ನನ್ನು ತಗ್ಗಿಸಿಕೊಂಡದ್ದರಿಂದ ಅವನ ಮೇಲಿದ್ದ ದೇವರ ಕೋಪವು ಶಾಂತವಾಯಿತು. ಹೀಗೆ ಯೆಹೋವನು ಅವನನ್ನು ಸಂಪೂರ್ಣವಾಗಿ ನಾಶಮಾಡಲಿಲ್ಲ. ಯಾಕೆಂದರೆ ಯೆಹೂದದಲ್ಲಿ ಇನ್ನೂ ಕೆಲವು ನೀತಿವಂತರಿದ್ದರು. [*ನೀತಿವಂತರು ಬಹುಶಃ, ರೆಹಬ್ಬಾಮನಂತೆ ಪಶ್ಚಾತ್ತಾಪಪಟ್ಟ ಇತರರನ್ನು ಇದು ಸೂಚಿಸುತ್ತಿರಬಹುದು. ದೇವರು ಅವರನ್ನು ಉಳಿಸಿ ಕಾಪಾಡಿದನು.]
ರಾಜನಾದ ರೆಹಬ್ಬಾಮನು ತನ್ನ ರಾಜ್ಯವನ್ನು ಸ್ಥಿರಪಡಿಸಿಕೊಂಡು ಬಲಗೊಂಡನು. ಅವನು ಪಟ್ಟಕ್ಕೆ ಬಂದಾಗ ನಲವತ್ತೊಂದು ವರ್ಷದವನಾಗಿದ್ದನು. ಅವನು ಜೆರುಸಲೇಮಿನಲ್ಲಿ ಹದಿನೇಳು ವರ್ಷ ಆಳಿದನು. ಯೆಹೋವನು ತಾನೇ ತನ್ನ ಹೆಸರನ್ನು ಸ್ಥಾಪಿಸುವದಕ್ಕೋಸ್ಕರ ಇಸ್ರೇಲಿನ ಎಲ್ಲಾ ಕುಲಗಳಲ್ಲಿ ಜೆರುಸಲೇಮನ್ನು ಆರಿಸಿಕೊಂಡಿದ್ದನು. ರೆಹಬ್ಬಾಮನ ತಾಯಿಯ ಹೆಸರು ನಯಮಾ. ಆಕೆ ಅಮ್ಮೋನ್ ದೇಶದವಳು.
ಪ್ರವಾದಿಯಾದ ಶೆಮಾಯ ಮತ್ತು ದರ್ಶಿಯಾದ ಇದ್ದೋ ಬರೆದ ಚರಿತ್ರೆಗಳ ವಂಶಾವಳಿಗಳಲ್ಲಿ ರೆಹಬ್ಬಾಮನು ತಾನು ರಾಜನಾಗಿದ್ದಾಗ ತನ್ನ ಆಳ್ವಿಕೆಯ ಮೊದಲಿನಿಂದ ಕಡೆಯವರೆಗೆ ಮಾಡಿದ ಎಲ್ಲಾ ವಿಷಯಗಳು ಬರೆಯಲ್ಪಟ್ಟಿವೆ. ಅವನ ಆಳ್ವಿಕೆಯ ಕಾಲದಲ್ಲೆಲ್ಲಾ ಅವನಿಗೂ ಯಾರೊಬ್ಬಾಮನಿಗೂ ಯುದ್ಧಗಳು ನಡೆಯುತ್ತಲೇ ಇದ್ದವು.