ಮುಂದಿನ ದಿನಗಳಲ್ಲಿ ಕೆಲವು ಜನರು ಸತ್ಯ ಬೋಧನೆಯನ್ನು ನಂಬುವುದಿಲ್ಲವೆಂದು ಪವಿತ್ರಾತ್ಮನು ಸ್ಪಷ್ಟವಾಗಿ ಹೇಳುತ್ತಾನೆ. ಆ ಜನರು ಸುಳ್ಳಾಡುವ ದುರಾತ್ಮಗಳಿಗೆ ವಿಧೇಯರಾಗುವರು; ದೆವ್ವಗಳ ಬೋಧನೆಯನ್ನು ಅನುಸರಿಸುವರು.
ಆ ಬೋಧನೆಗಳು ಸುಳ್ಳು ಹೇಳುವ ಮತ್ತು ವಂಚಿಸುವ ಜನರ ಮೂಲಕ ಬರುತ್ತವೆ. ಅವರು ಸರಿತಪ್ಪುಗಳ ಭೇದವನ್ನು ಗುರುತಿಸುವುದಿಲ್ಲ. ಕಾದ ಕಬ್ಬಿಣದಿಂದ ಸುಟ್ಟು ಬೂದಿಯಾಗುವಂತೆ ಅವರ ವಿವೇಕವು ನಾಶಗೊಂಡಿದೆ.
ಜನರು ಮದುವೆಮಾಡಿಕೊಳ್ಳಬಾರದೆಂದೂ ಕೆಲವು ಆಹಾರಪದಾರ್ಥಗಳನ್ನು ತಿನ್ನಬಾರದೆಂದೂ ಅವರು ಹೇಳುತ್ತಾರೆ. ಆದರೆ ನಂಬಿಕೆಯುಳ್ಳವರು ಮತ್ತು ಸತ್ಯವನ್ನು ತಿಳಿದಿರುವವರು ಕೃತಜ್ಞತಾಸ್ತುತಿ ಮಾಡಿ ಆ ಆಹಾರಪದಾರ್ಥಗಳನ್ನು ತಿನ್ನಲಿ. ಏಕೆಂದರೆ ಅವುಗಳನ್ನು ನಿರ್ಮಿಸಿದಾತನು ದೇವರೇ.
ಅಲ್ಲಿರುವ ಸಹೋದರ ಸಹೋದರಿಯರಿಗೆ ಈ ಸಂಗತಿಗಳನ್ನು ತಿಳಿಸಿದರೆ, ನೀನು ಕ್ರಿಸ್ತ ಯೇಸುವಿನ ಒಳ್ಳೆಯ ಸೇವಕನಾಗಿರುವೆ ಎಂಬುದನ್ನೂ ನಂಬಿಕೆಯ ನುಡಿಗಳಿಂದ ಮತ್ತು ಉತ್ತಮ ಉಪದೇಶಗಳನ್ನು ಅನುಸರಿಸಿದ್ದರಿಂದ ಬಲಗೊಂಡಿರುವೆ ಎಂಬುದನ್ನೂ ತೋರಿಸಿದಂತಾಗುತ್ತದೆ.
ನೀನು ದೇಹವನ್ನು ಪಳಗಿಸಿಕೊಂಡರೆ ನಿನಗೆ ಕೆಲವು ರೀತಿಯಲ್ಲಿ ಸಹಾಯಕವಾಗುವುದು. ಆದರೆ ದೇವರ ಸೇವೆಯು ನಿನಗೆ ಎಲ್ಲಾ ರೀತಿಯಲ್ಲಿಯೂ ಸಹಾಯಕವಾಗುವುದು. ದೇವರ ಸೇವೆಯು ಇಹಪರಗಳೆರಡರಲ್ಲೂ ನಿನಗೆ ಆಶೀರ್ವಾದವನ್ನು ಉಂಟು ಮಾಡುವುದು.
ಆದಕಾರಣವೇ, ನಾವು ಜೀವಸ್ವರೂಪನಾದ ದೇವರ ಮೇಲೆ ನಿರೀಕ್ಷೆಯಿಟ್ಟು ದುಡಿಯುತ್ತಿದ್ದೇವೆ ಮತ್ತು ಹೋರಾಡುತ್ತಿದ್ದೇವೆ. ಆತನು ಎಲ್ಲಾ ಜನರಿಗೆ ರಕ್ಷಕನಾಗಿದ್ದಾನೆ. ತನ್ನಲ್ಲಿ ನಂಬಿಕೆಯಿಡುವ ಜನರಿಗೆಲ್ಲಾ ಆತನು ವಿಶೇಷವಾದ ರೀತಿಯಲ್ಲಿ ರಕ್ಷಕನಾಗಿದ್ದಾನೆ.
ನೀನು ಯೌವನಸ್ಥನಾಗಿರುವುದರಿಂದ ನಿನ್ನನ್ನು ಪ್ರಮುಖನಲ್ಲವೆಂದು ಪರಿಗಣಿಸಿ ಅಸಡ್ಡೆಮಾಡಲು ಯಾರಿಗೂ ಅವಕಾಶಕೊಡದಿರು. ವಿಶ್ವಾಸಿಗಳು ಹೇಗೆ ಜೀವಿಸಬೇಕೆಂಬುದಕ್ಕೆ ನೀನೇ ಅವರಿಗೆ ಮಾದರಿಯಾಗಿರು. ನಡೆನುಡಿಗಳಲ್ಲಿ, ಪ್ರೀತಿಯಲ್ಲಿ, ನಂಬಿಕೆಯಲ್ಲಿ ಮತ್ತು ಪರಿಶುದ್ಧ ಜೀವನದಲ್ಲಿ ನೀನೇ ಅವರಿಗೆ ಮಾದರಿಯಾಗಿರು.