ಸಹೋದರ ಸಹೋದರಿಯರೇ, ಈಗ ನಿಮಗೆ ಇತರ ಕೆಲವು ವಿಚಾರಗಳನ್ನು ತಿಳಿಸುತ್ತೇನೆ. ದೇವರನ್ನು ಮೆಚ್ಚಿಸಲು ಹೇಗೆ ಜೀವಿಸಬೇಕೆಂದು ನಿಮಗೆ ಕಲಿಸಿದ್ದೇವೆ. ನೀವು ಅದೇ ರೀತಿಯಲ್ಲಿ ಜೀವಿಸುತ್ತಿರುವಿರಿ. ಅದೇ ರೀತಿಯಲ್ಲಿ ಇನ್ನೂ ಹೆಚ್ಚು ಸಮರ್ಪಕವಾಗಿ ಜೀವಿಸಬೇಕೆಂದು ನಾವು ನಿಮ್ಮನ್ನು ಕ್ರಿಸ್ತನಲ್ಲಿ ಕೇಳಿಕೊಳ್ಳುತ್ತೇವೆ ಮತ್ತು ಪ್ರೋತ್ಸಾಹಿಸುತ್ತೇವೆ.
ನಿಮ್ಮಲ್ಲಿ ಪ್ರತಿಯೊಬ್ಬರೂ ನಿಮ್ಮ ಸ್ವಂತ ದೇಹಗಳನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬೇಕೆಂಬುದು ದೇವರ ಅಪೇಕ್ಷೆ. ನಿಮ್ಮ ದೇಹವನ್ನು ಪವಿತ್ರವಾದ ಮಾರ್ಗದಲ್ಲಿ ಬಳಸಿದರೆ, ದೇವರಿಗೆ ಗೌರವವನ್ನು ನೀಡಿದಂತಾಗುವುದು. [*ಅಥವಾ “ನಮ್ಮಲ್ಲಿ ಪ್ರತಿಯೊಬ್ಬರಿಗೂ ಪರಿಶುದ್ಧವಾದ ಮತ್ತು ಗೌರವಾನ್ವಿತವಾದ ರೀತಿಯಲ್ಲಿ ತನ್ನ ಸ್ವಂತ ಹೆಂಡತಿಯನ್ನು ಪಡೆದುಕೊಳ್ಳಲು ಗೊತ್ತಿದೆ.”]
ಈ ವಿಷಯದಲ್ಲಿ ನಿಮ್ಮಲ್ಲಿ ಯಾರೂ ಕ್ರಿಸ್ತನಲ್ಲಿ ಸಹೋದರನಾದವನನ್ನು ವಂಚಿಸಿ ಕೇಡುಮಾಡಬಾರದು. ನಾವು ಈಗಾಗಲೇ ನಿಮಗೆ ಹೇಳಿದಂತೆ ಮತ್ತು ಎಚ್ಚರಿಕೆ ನೀಡಿದಂತೆ ಇವೆಲ್ಲವುಗಳ ವಿಷಯದಲ್ಲಿ ದೇವರು ದಂಡಿಸುತ್ತಾನೆ.
ಕ್ರಿಸ್ತನಲ್ಲಿ ಸಹೋದರ ಸಹೋದರಿಯರನ್ನು ಹೇಗೆ ಪ್ರೀತಿಸಬೇಕೆಂಬುದರ ಬಗ್ಗೆ ನಾವು ನಿಮಗೆ ಬರೆಯುವ ಅವಶ್ಯಕತೆಯಿಲ್ಲ. ಒಬ್ಬರನ್ನೊಬ್ಬರು ಹೇಗೆ ಪ್ರೀತಿಸಬೇಕೆಂಬುದನ್ನು ಈಗಾಗಲೇ ದೇವರು ನಿಮಗೆ ಕಲಿಸಿದ್ದಾನೆ.
ಮಕೆದೋನಿಯದಲ್ಲಿರುವ ಸಹೋದರ ಸಹೋದರಿಯರನ್ನೆಲ್ಲ ನೀವು ನಿಜವಾಗಿಯೂ ಪ್ರೀತಿಸುತ್ತಿದ್ದೀರಿ. ಅವರನ್ನು ಇನ್ನೂ ಹೆಚ್ಚೆಚ್ಚಾಗಿ ನೀವು ಪ್ರೀತಿಸಬೇಕೆಂದು ನಾವು ನಿಮ್ಮನ್ನು ಪ್ರೋತ್ಸಾಹಿಸುತ್ತೇವೆ.
ಶಾಂತಿಯಿಂದ ಜೀವಿಸಲು ನಿಮ್ಮಿಂದಾದಷ್ಟು ಪ್ರಯತ್ನಿಸಿರಿ. ನಿಮ್ಮ ಸ್ವಂತ ವ್ಯವಹಾರದ ಮೇಲ್ವಿಚಾರಣೆಯನ್ನು ನೋಡಿಕೊಳ್ಳಿ. ನಿಮ್ಮ ಕೈಯಾರೆ ಕೆಲಸ ಮಾಡಬೇಕೆಂದು ನಾವು ಈಗಾಗಲೇ ನಿಮಗೆ ಹೇಳಿದ್ದೇವೆ.
ನೀವು ಹೀಗೆ ಮಾಡಿದರೆ, ವಿಶ್ವಾಸಿಗಳಲ್ಲದವರು ನಿಮ್ಮ ಜೀವತದ ರೀತಿಯನ್ನು ಕಂಡು ನಿಮ್ಮನ್ನು ಗೌರವಿಸುತ್ತಾರೆ. ಅಲ್ಲದೆ ನಿಮ್ಮ ಅಗತ್ಯತೆಗಳ ಪೂರೈಕೆಗಾಗಿ ನೀವು ಬೇರೆಯವರನ್ನು ಅವಲಂಬಿಸಿಕೊಳ್ಳುವ ಅವಶ್ಯಕತೆಯೂ ಇರುವುದಿಲ್ಲ.
ಯೇಸು ಸತ್ತುಹೋದನೆಂದು ನಾವು ನಂಬುತ್ತೇವೆ. ಆದರೆ ಯೇಸು ಮತ್ತೆ ಜೀವಂತವಾಗಿ ಎದ್ದುಬಂದನೆಂಬುದನ್ನೂ ನಾವು ನಂಬುತ್ತೇವೆ. ಹಾಗೆಯೇ ಯೇಸುವಿನಲ್ಲಿ ವಿಶ್ವಾಸವಿಟ್ಟು ಸತ್ತುಹೋದವರನ್ನು ದೇವರು ಆತನ ಜೊತೆಯಲ್ಲಿ ಕರೆದುಕೊಂಡು ಬರುವನು.
ಈಗ ನಾವು ನಿಮಗೆ ಹೇಳುತ್ತಿರುವುದು ಪ್ರಭುವಿನ ಸ್ವಂತ ಸಂದೇಶವನ್ನೇ. ಪ್ರಭುವು ಮತ್ತೆ ಬಂದಾಗ ಈಗ ಜೀವಿಸುತ್ತಿರುವ ನಾವು ಇನ್ನೂ ಜೀವದಿಂದ ಇದ್ದರೆ ನಾವು ಪ್ರಭುವಿನ ಜೊತೆಯಲ್ಲಿರುತ್ತೇವೆ. ಆದರೂ ಸತ್ತುಹೋದ ಇತರರಿಗಿಂತಲೂ ನಾವು ಮುಂದಿನವರಾಗುವುದಿಲ್ಲ.
ಅನಂತರ, ಇನ್ನೂ ಜೀವದಿಂದುಳಿದಿರುವ ನಾವು ಸತ್ತವರೊಡನೆ ಒಂದುಗೂಡುವೆವು. ಪ್ರಭುವನ್ನು ಅಂತರಿಕ್ಷದಲ್ಲಿ ಎದುರುಗೊಳ್ಳಲು ನಾವು ಮೇಘಗಳ ನಡುವೆ ಎತ್ತಲ್ಪಡುವೆವು. ಹೀಗೆ ನಾವು ಯಾವಾಗಲೂ ಪ್ರಭುವಿನೊಂದಿಗೆ ಇರುವೆವು.