ಹೀಗಿರಲಾಗಿ, ನಾನು ನಿಮಗೆ ಹೇಳುವುದೇನೆಂದರೆ, ದೇವರಾತ್ಮನ ಸಹಾಯದಿಂದ ಮಾತಾಡುವ ಯಾವ ವ್ಯಕ್ತಿಯೇ ಆಗಲಿ, “ಯೇಸು ಶಾಪಗ್ರಸ್ತನಾಗಲಿ” ಎಂದು ಹೇಳುವುದಿಲ್ಲ. ಅಂತೆಯೇ ಪವಿತ್ರಾತ್ಮನ ಸಹಾಯವಿಲ್ಲದೆ ಯಾವ ವ್ಯಕ್ತಿಯೇ ಆಗಲಿ, “ಯೇಸುವೇ ಪ್ರಭು” ಎಂದು ಹೇಳಲಾರನು.
ಮತ್ತೊಬ್ಬನಿಗೆ ಅದ್ಭುತಕಾರ್ಯಗಳನ್ನು ಮಾಡುವ ಶಕ್ತಿಯನ್ನೂ ಇನ್ನೊಬ್ಬನಿಗೆ ಪ್ರವಾದಿಸುವ ಸಾಮರ್ಥ್ಯವನ್ನೂ ಇನ್ನೊಬ್ಬನಿಗೆ ಒಳ್ಳೆಯ ಮತ್ತು ಕೆಟ್ಟ ಆತ್ಮಗಳ ನಡುವೆ ಇರುವ ವ್ಯತ್ಯಾಸವನ್ನು ತಿಳಿದುಕೊಳ್ಳುವ ಸಾಮರ್ಥ್ಯವನ್ನೂ ಕೊಡುತ್ತಾನೆ; ಒಬ್ಬನಿಗೆ ಅನೇಕ ಭಾಷೆಗಳನ್ನು ಮಾತಾಡುವ ಸಾಮರ್ಥ್ಯವನ್ನೂ ಮತ್ತೊಬ್ಬನಿಗೆ ಆ ಭಾಷೆಗಳನ್ನು ಅನುವಾದಿಸುವ ಸಾಮರ್ಥ್ಯವನ್ನೂ ಕೊಡುತ್ತಾನೆ.
ನಮ್ಮಲ್ಲಿ ಕೆಲವರು ಯೆಹೂದ್ಯರಿದ್ದಾರೆ, ಕೆಲವರು ಗ್ರೀಕರಿದ್ದಾರೆ, ಕೆಲವರು ಗುಲಾಮರಿದ್ದಾರೆ, ಕೆಲವರು ಸ್ವತಂತ್ರರಿದ್ದಾರೆ, ಆದರೆ ನಾವೆಲ್ಲರೂ ಒಂದೇ ದೇಹವಾಗುವುದಕ್ಕಾಗಿ ಒಬ್ಬನೇ ಪವಿತ್ರಾತ್ಮನ ಮೂಲಕ ದೀಕ್ಷಾಸ್ನಾನ ಮಾಡಿಸಿಕೊಂಡೆವು. ನಮ್ಮೆಲ್ಲರಿಗೂ ಒಬ್ಬನೇ ಪವಿತ್ರಾತ್ಮನನ್ನು ಕೊಡಲಾಯಿತು. [*ಕೊಡಲಾಯಿತು ಅಕ್ಷರಶಃ, “ಪಾನಕ್ಕಾಗಿ ಕೊಡಲ್ಪಟ್ಟನು.”]
(18-19) ದೇಹದ ಪ್ರತಿಯೊಂದು ಅಂಗವು ಒಂದೇ ರೀತಿಯ ಅಂಗವಾಗಿದ್ದರೆ, ಆಗ ದೇಹವೇ ಇರುತ್ತಿರಲಿಲ್ಲ. ಆದರೆ ದೇವರು ತನ್ನ ಇಚ್ಛೆಗನುಸಾರವಾಗಿ ದೇಹದಲ್ಲಿ ಅಂಗಾಂಗಗಳನ್ನು ಇಟ್ಟಿದ್ದಾನೆ. ಆತನು ಅವುಗಳಲ್ಲಿ ಪ್ರತಿಯೊಂದಕ್ಕೂ ಸ್ಥಳವನ್ನು ಗೊತ್ತುಪಡಿಸಿದ್ದಾನೆ.
ನಾವು ದೇಹದ ಯಾವ ಅಂಗಗಳನ್ನು ಅಲ್ಪವಾದುವುಗಳೆಂದು ಎಣಿಸುತ್ತೇವೋ ಆ ಅಂಗಗಳ ಬಗ್ಗೆ ಹೆಚ್ಚು ಎಚ್ಚರಿಕೆ ತೆಗೆದುಕೊಳ್ಳುತ್ತೇವೆ. ನಾವು ನಮ್ಮ ಯಾವ ಅಂಗಗಳನ್ನು ತೋರಿಸಬಯಸುವುದಿಲ್ಲವೋ ಆ ಅಂಗಗಳನ್ನು ವಿಶೇಷವಾದ ರೀತಿಯಲ್ಲಿ ಸಂರಕ್ಷಿಸುತ್ತೇವೆ.
ಬಹು ಸುಂದರವಾದ ಅಂಗಗಳಿಗೆ ಇಂಥ ವಿಶೇಷ ಸಂರಕ್ಷಣೆಯ ಅಗತ್ಯವಿರುವುದಿಲ್ಲ. ಆದರೆ ದೇವರು ಅಂಗಗಳನ್ನು ಒಟ್ಟಾಗಿ ಸೇರಿಸಿದ್ದಾನೆ ಮತ್ತು ಕೊರತೆಯಲ್ಲಿರುವ ಅಂಗಗಳಿಗೆ ಹೆಚ್ಚಿನ ಮಾನ್ಯತೆಯನ್ನು ಕೊಟ್ಟಿದ್ದಾನೆ.
ದೇವರು ಸಭೆಯಲ್ಲಿ ಅಪೊಸ್ತಲರಿಗೆ ಮೊದಲನೆಯ ಸ್ಥಾನವನ್ನೂ ಪ್ರವಾದಿಗಳಿಗೆ ಎರಡನೆಯ ಸ್ಥಾನವನ್ನೂ ಉಪದೇಶಕರಿಗೆ ಮೂರನೆಯ ಸ್ಥಾನವನ್ನೂ ಇಟ್ಟಿದ್ದಾನೆ. ಇದಲ್ಲದೆ ದೇವರು, ಅದ್ಭುತಕಾರ್ಯಗಳನ್ನು ಮಾಡುವ ಜನರಿಗೂ ಸ್ಪಸ್ಥಪಡಿಸುವ ಜನರಿಗೂ ಇತರರಿಗೆ ಸಹಾಯಮಾಡುವ ಜನರಿಗೂ ಮುನ್ನಡೆಸಬಲ್ಲ ಜನರಿಗೂ ವಿವಿಧ ಭಾಷೆಗಳನ್ನು ಮಾತಾಡಬಲ್ಲ ಜನರಿಗೂ ಸಭೆಯಲ್ಲಿ ಸ್ಥಾನವನ್ನು ಕೊಟ್ಟಿದ್ದಾನೆ.