ಆದರೆ ಕರ್ತನು ಕಸ್ದೀಯರ, ಅರಾಮ್ಯರ, ಮೋವಾಬ್ಯರ, ಅಮ್ಮೋನ್ಯರ ಗುಂಪುಗಳನ್ನೂ ಅವನ ಮೇಲೆ ಕಳುಹಿಸಿದನು. ಕರ್ತನು ಪ್ರವಾದಿಗಳಾದ ತನ್ನ ಸೇವಕರ ಮುಖಾಂತರ ಹೇಳಿದ ಮಾತಿನ ಪ್ರಕಾರ ಯೆಹೂದವನ್ನು ನಾಶ ಮಾಡುವಂತೆ ಅದರ ಮೇಲೆ ಅವರನ್ನು ಬರಮಾಡಿದನು.
ನಿಶ್ಚಯವಾಗಿ ಕರ್ತನ ಅಪ್ಪಣೆಯಿಂದ ಇದು ಯೆಹೂದದ ಮೇಲೆ ಆಯಿತು. ಅದೇನಂದರೆ, ಮನಸ್ಸೆಯು ತನ್ನ ಎಲ್ಲಾ ಕೃತ್ಯಗಳಿಂದ ಮಾಡಿದ ಪಾಪಗಳ ನಿಮಿತ್ತ ಅವರನ್ನು ಆತನು ತನ್ನ ಸಮ್ಮುಖದಿಂದ ತೆಗೆದು ಹಾಕುವದಕ್ಕೋಸ್ಕರವೇ.
ಆದರೆ ಐಗುಪ್ತದ ಅರಸನು ತನ್ನ ದೇಶದಿಂದ ತಿರಿಗಿ ಬರಲಿಲ್ಲ. ಯಾಕಂದರೆ ಐಗುಪ್ತದ ನದಿ ಮೊದಲು ಗೊಂಡು ಯೂಫ್ರೇಟೀಸ್ ನದಿಯ ವರೆಗೂ ಐಗು ಪ್ತದ ಅರಸನಿಗೆ ಇದ್ದದ್ದೆಲ್ಲಾ ಬಾಬೆಲಿನ ಅರಸನು ಹಿಡಿದಿದ್ದನು.
ಆಗ ಯೆಹೂದದ ಅರಸನಾದ ಯೆಹೋಯಾಖೀನನೂ ಅವನ ತಾಯಿಯೂ ಸೇವ ಕರೂ ಪ್ರಧಾನರೂ ಕಂಚುಕಿಯರೂ ಅಧಿಕಾರಿಗಳ ಸಹಿತವಾಗಿ ಬಾಬೆಲಿನ ಅರಸನ ಬಳಿಗೆ ಹೋದರು. ಬಾಬೆಲಿನ ಅರಸನು ತನ್ನ ಆಳಿಕೆಯ ಎಂಟನೇ ವರುಷ ದಲ್ಲಿ ಅವನನ್ನು ಸೆರೆಹಿಡಿದನು.
ಕರ್ತನು ಹೇಳಿದ ಪ್ರಕಾರವೇ ಅವನು ಅಲ್ಲಿಂದ ಕರ್ತನ ಮನೆಯ ಎಲ್ಲಾ ಬೊಕ್ಕಸಗಳನ್ನೂ ಅರಮನೆಯ ಬೊಕ್ಕಸಗಳನ್ನೂ ಇಸ್ರಾಯೇಲಿನ ಅರಸನಾದ ಸೊಲೊಮೋನನು ಕರ್ತನ ಮನೆಯಲ್ಲಿ ಮಾಡಿದ ಬಂಗಾರದ ಎಲ್ಲಾ ಪಾತ್ರೆಗಳನ್ನೂ ತುಂಡು ತುಂಡಾಗಿ ಕತ್ತರಿಸಿಬಿಟ್ಟನು.
ಅವನು ಯೆರೂಸಲೇಮಿನವರೆಲ್ಲರನ್ನೂ ಎಲ್ಲಾ ಪ್ರಧಾನರನ್ನೂ ಎಲ್ಲಾ ಸ್ಥಿತಿಯುಳ್ಳ ಪರಾಕ್ರಮಶಾಲಿ ಗಳನ್ನೂ ಹತ್ತು ಸಾವಿರ ಸೆರೆಯವರನ್ನೂ ಮತ್ತು ಎಲ್ಲಾ ಕೌಶಲ್ಯಗಾರರನ್ನೂ ಕಮ್ಮಾರರನ್ನೂ ಅಲ್ಲಿಂದ ಒಯ್ದನು; ದೇಶದ ಬಡವರ ಹೊರತು ಉಳಿದವರು ಯಾರೂ ಅಲ್ಲಿ ಇರಲಿಲ್ಲ.
ಬಾಬೆಲಿನ ಅರಸನು ಎಲ್ಲಾ ಸ್ಥಿತಿವಂತರಾದ ಏಳುಸಾವಿರ ಜನರನ್ನೂ ಕೌಶಲ್ಯಗಾರರೂ ಮತ್ತು ಕಮ್ಮಾರರೂ ಆದ ಸಾವಿರ ಜನರನ್ನೂ ಬಲವುಳ್ಳ ಯುದ್ಧ ಮಾಡತಕ್ಕವರೆಲ್ಲರನ್ನೂ ಬಾಬೆಲಿಗೆ ಸೆರೆಯಾಗಿ ಒಯ್ದನು.