ಆಗ ಅವರು ದಾಗೋನನನ್ನು ತೆಗೆದು ಅದನ್ನು ಅದರ ಸ್ಥಳದಲ್ಲಿ ತಿರಿಗಿ ಇಟ್ಟರು. ಅವರು ಮಾರನೆ ದಿವಸ ಬೆಳಿಗ್ಗೆ ಬಂದಾಗ ಇಗೋ, ದಾಗೋನ್ ಕರ್ತನ ಮಂಜೂಷದ ಮುಂದೆ ಬೋರಲು ಬಿದ್ದಿತ್ತು; ದಾಗೋನನ ತಲೆಯೂ ಅದರ ಎರಡು ಕೈಗಳೂ ಹೊಸ್ತಿಲ ಮೇಲೆ ಕಡಿಯಲ್ಪಟ್ಟು ಬಿದ್ದಿದ್ದವು; ಮುಂಡ ಮಾತ್ರ ಅದಕ್ಕೆ ಉಳಿದಿತ್ತು.
ಈ ಪ್ರಕಾರ ಸಂಭವಿಸಿದ್ದನ್ನು ಅಷ್ಡೋದಿನ ಜನರು ನೋಡಿ--ಇಸ್ರಾಯೇಲ್ ದೇವರ ಮಂಜೂಷವು ನಮ್ಮ ಬಳಿಯಲ್ಲಿ ಇರಬಾರದು; ಯಾಕಂದರೆ ಆತನ ಕೈ ನಮ್ಮ ಮೇಲೆಯೂ ನಮ್ಮ ದೇವರಾದ ದಾಗೋನನ ಮೇಲೆಯೂ ಕಠಿಣವಾಗಿದೆ ಅಂದರು.
ಅವರು ಫಿಲಿಷ್ಟಿ ಯರ ಅಧಿಪತಿಗಳೆಲ್ಲರನ್ನು ತಮ್ಮ ಬಳಿಗೆ ಕರೇಕಳುಹಿಸಿ ಅವರಿಗೆ--ಇಸ್ರಾಯೇಲ್ ದೇವರ ಮಂಜೂಷವನ್ನು ಏನು ಮಾಡೋಣ ಅಂದರು. ಅದಕ್ಕವರು--ಇಸ್ರಾ ಯೇಲ್ ದೇವರ ಮಂಜೂಷವು ಗತ್ ಊರಿಗೆ ಒಯ್ಯಲ್ಪಡಲಿ ಅಂದರು. ಅವರು ಇಸ್ರಾಯೇಲ್ ದೇವರ ಮಂಜೂಷವನ್ನು ಗತ್ಗೆ ಒಯ್ದರು.
ಆದರೆ ಅವರು ಅದನ್ನು ಸುತ್ತಿ ತಂದ ತರುವಾಯ ಕರ್ತನ ಕೈ ಆ ಪಟ್ಟಣದ ಮೇಲೆ ಬಂದು ಮಹಾ ದೊಡ್ಡನಾಶ ಮಾಡಿತು. ಇದಲ್ಲದೆ ಕರ್ತನು ಚಿಕ್ಕವರಿಂದ ಹಿರಿಯರ ವರೆಗೂ ಆ ಪಟ್ಟಣದ ಮನುಷ್ಯರನ್ನು ಹೊಡೆದನು; ಅವರಿಗೆ ಗಡ್ಡೆರೋಗ ಹುಟ್ಟಿತು.
ಅವರು ದೇವರ ಮಂಜೂಷವನ್ನು ಎಕ್ರೋನಿಗೆ ಕಳುಹಿಸಿದರು. ದೇವರ ಮಂಜೂಷವು ಎಕ್ರೋನಿಗೆ ಬಂದಾಗ ಆದದ್ದೇನಂದರೆ, ಎಕ್ರೋನ್ಯರು ನಮ್ಮನ್ನೂ ನಮ್ಮ ಜನರನ್ನೂ ಕೊಂದು ಹಾಕಬೇಕೆಂದು ಇಸ್ರಾಯೇಲ್ ದೇವರ ಮಂಜೂಷವನ್ನು ನಮ್ಮ ಬಳಿಗೆ ತಂದರೆಂದು ಕೂಗಿ ಹೇಳಿದರು.
ಆಗ ಆ ಪಟ್ಟಣದಲ್ಲೆಲ್ಲಾ ಮರಣಕರವಾದ ನಾಶನ ಉಂಟಾಗಿ ದೇವರ ಕೈ ಅಲ್ಲಿ ಮಹಾಭಾರವಾಗಿದ್ದರಿಂದ ಅವರು ಫಿಲಿಷ್ಟಿಯರ ಅಧಿಪತಿಗಳೆಲ್ಲರನ್ನು ಒಟ್ಟು ಗೂಡಿಸಿ ಇಸ್ರಾಯೇಲ್ ದೇವರ ಮಂಜೂಷವು ನಮ್ಮನ್ನೂ ನಮ್ಮ ಜನರನ್ನೂ ಕೊಂದುಹಾಕದ ಹಾಗೆ ನೀವು ಅದನ್ನು ಅದರ ಸ್ವಸ್ಥಳಕ್ಕೆ ತಿರಿಗಿ ಹೋಗುವಂತೆ ಕಳುಹಿಸಿಬಿಡಿರಿ ಅಂದರು.